Harihar News
ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ;
ಐತಿಹಾಸಿಕ ವಿಸರ್ಜನಾ ಶೋಭಾಯಾತ್ರೆ ನವಮಿದಿನ ಅಷ್ಟ ಗಣಪತಿಗಳ ಭವ್ಯ ವಿಸರ್ಜನೆ- ಸಾವಿರಾರು ಭಕ್ತರ ಸಂಭ್ರಮ
ಹರಿಹರ True Media Kannada : ಗಣೇಶೋತ್ಸವದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಗರದ ಪ್ರಮುಖ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಬೃಹತ್ ಶೋಭಾಯಾತ್ರೆಗೆ ನಗರ ಭಾನುವಾರ ಸಾಕ್ಷಿಯಾಯಿತು. ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಹಾಗೂ ಸಾರ್ವಜನಿಕ ವಿನಾಯಕ ಸಮಿತಿಗಳ ನೇತೃತ್ವದಲ್ಲಿ ನಗರದ ಪ್ರಮುಖ 8 ಗಣೇಶ ಮೂರ್ತಿಗಳ ವಿಸರ್ಜನಾ ಶೋಭಾಯಾತ್ರೆ ಭಾರಿ ಪೊಲೀಸ್ ಬಂದೋಬಸ್ತ್ ನಡುವೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಹರಿಹರ ನಗರದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ನವಮಿಯ ಭಾನುವಾರ ಅಷ್ಟ ಗಣಪತಿಗಳ ವಿಸರ್ಜನಾ ಕಾರ್ಯ ಐತಿಹಾಸಿಕವಾಗಿ ನಡೆದು ನಿಜಕ್ಕೂ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿದ್ದಂತು ಸುಳ್ಳಲ್ಲ.ಸುಮಾರು 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಕ್ತಾದಿಗಳು ಭಾಗವಹಿಸಿ ಅತ್ಯಂತ ಯಶಸ್ವಿಯಾಗಿ ವಿಸರ್ಜನಾ ಕಾರ್ಯಕ್ರಮ ನಡೆದು ಹರಿಹರದ ಜನತೆಗೆ ಹೊಸದೊಂದು ಮಜಲನ್ನೇ ಸೃಷ್ಟಿಸಿತು.
ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ ಭಾರಿ ಜನಸ್ತೋಮ :
ಹರಿಹರದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಶೋಭಾಯಾತ್ರೆ ಆಯೋಜನೆಯಾಗಿದ್ದರಿಂದ, ದಾವಣಗೆರೆ ಸೇರಿದಂತೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ತಾಲೂಕುಗಳಿಂದ ಹಾಗೂ ಹರಿಹರ ತಾಲೂಕಿನ ಬಹುತೇಕ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ನಗರಕ್ಕೆ ಆಗಮಿಸಿದ್ದರು. ರಜಾದಿನವಾದ ಭಾನುವಾರವೂ ಆಗಿದ್ದರಿಂದ ನಗರದಲ್ಲಿ ಹೆಚ್ಚಿನ ಜನಸಾಗರವೇ ಕಂಡುಬಂದಿತು.
ಶಾಸಕ ಬಿ.ಪಿ. ಹರೀಶ ಮಾತನಾಡಿ, ಹಿಂದೂ ಮಹಾ ಗಣಪತಿ ಹಾಗೂ ಸಾರ್ವಜನಿಕ ಗಣೇಶ ವಿಸರ್ಜನಾ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಸರ್ವರಿಗೂ ಶ್ರೀ ಗಣೇಶನು ಶುಭ ಹಾರೈಸಲಿ. ಭಕ್ತರಿಗೆ ಅನ್ನಸಂತರ್ಪಣೆ, ತಂಪುಪಾನೀಯ, ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ವ್ಯಾಪಾರಸ್ಥರಿಂದ ಭಕ್ತರಿಗೆ ಆತ್ಮೀಯ ಸ್ವಾಗತ :
ಬೃಹತ್ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ನಗರದ ಸಣ್ಣ, ಅತಿ ಸಣ್ಣ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಕ್ತರಿಗೆ ಉಪಾಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡಿದ್ದರು.
ನಗರದ ವಿವಿಧೆಡೆ ಅಂಗಡಿಗಳ ಮುಂದೆ ಶಾಮಿಯಾನ ಹಾಕಿ ಬೆಳಗ್ಗಿನಿಂದಲೇ ದೋಸೆ, ಪುಳಿಯೋಗರೆ,ಉಪ್ಪಿಟ್ಟು, ಗೋದಿ ಪಾಯಸ ,ಪಲಾವು, ಮಜ್ಜಿಗೆ, ತಂಪುಪಾನೀಯ ಹಾಗೂ ಶುದ್ಧ ಕುಡಿಯುವ ನೀರಿನ ಬಾಟಲಿಗಳಲ್ಲಿ ವಿತರಿಸಲಾಯಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಶುಭ ಹಾರೈಸುವ ಮೂಲಕ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತಮ್ಮ ಅಭಿಮಾನ ಮತ್ತು ಸಹಕಾರವನ್ನು ವ್ಯಕ್ತಪಡಿಸಿದರು.
ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ಹಲವು ಅಂಗಡಿ-ಮುಂಗಟ್ಟುಗಳ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಭಕ್ತರಿಗೆ ಶುಭ ಕೋರಿದ್ದು ವಿಶೇಷವಾಗಿತ್ತು.
ಸಾರ್ವಜನಿಕರನ್ನು ಆಕರ್ಷಿಸಿದ ಬೃಹತ್ ಮಹಾದ್ವಾರಗಳು :
ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಿರ್ಮಿಸಲಾಗಿದ್ದ 25 ಅಡಿಗೂ ಹೆಚ್ಚು ಎತ್ತರದ ಪಂಚಮುಖಿ ವೀರಾಂಜನೇಯ ಮಹಾದ್ವಾರ ಭಕ್ತರ ಗಮನ ಸೆಳೆಯಿತು. ಅನ್ನದಾತ ರೈತರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಮತ್ತೊಂದು ಮಹಾದ್ವಾರವೂ ವಿಶೇಷ ಆಕರ್ಷಣೆಯಾಗಿತ್ತು.
ಮಹಾತ್ಮ ಗಾಂಧಿ ವೃತ್ತದಲ್ಲಿ ಅಜಾನುಬಾಹುವಾಗಿ ಗದಾಧಾರಿಯಾಗಿ ವೀರಾವೇಶದಿಂದ ನಿಂತಿರುವ ಆಂಜನೇಯನ ಪ್ರತಿಮೆಯ ಬಳಿಯೂ ಭಕ್ತರು ಹಾಗೂ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಬರ ನಿವಾರಣೆಗೆ ಗಣೇಶನಲ್ಲಿ ಪ್ರಾರ್ಥನೆ :
ಶೋಭಾಯಾತ್ರೆಗೆ ಶುಭ ಹಾರೈಸಲು ಆಗಮಿಸಿದ್ದ ಶಾಸಕರು ಹಾಗೂ ಗಣ್ಯರು, ಈ ಬಾರಿ ಬರಗಾಲದ ಸಂಕಷ್ಟವನ್ನು ಜನರು ಅನುಭವಿಸಿದ್ದು, ಶ್ರೀ ವಿಘ್ನೇಶ್ವರನ ಕೃಪೆಯಿಂದ ಮುಂದಿನ ದಿನಗಳಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಹರಿಹರ ಕ್ಷೇತ್ರದ ಎಲ್ಲ ಕೆರೆ-ಕಟ್ಟೆಗಳು ನೀರಿನಿಂದ ತುಂಬಿ ತುಳುಕಲಿ, ರೈತರಿಗೆ ಉತ್ತಮ ಮಳೆ-ಬೆಳೆ ದೊರೆಯಲಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿ ಹಾಗೂ ಕ್ಷೇತ್ರ ಸಮೃದ್ಧಿ ಮತ್ತು ಸಂಪದ್ಭರಿತವಾಗಲಿ ಎಂದು ಗಣೇಶನಲ್ಲಿ ಪ್ರಾರ್ಥಿಸಿದರು.
ಪೊಲೀಸ್ ಬಂದೋಬಸ್ತ್ :
ನಗರದಲ್ಲಿ ಸಾವಿರಾರು ಜನರು ಸೇರಿದ್ದ ಹಿನ್ನೆಲೆಯಲ್ಲಿ ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಚಾರ ವ್ಯವಸ್ಥೆ ಹಾಗೂ ಭದ್ರತೆಗೆ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ವಿವಿಧ ತಂಡಗಳು ಕಾರ್ಯನಿರ್ವಹಿಸಿದವು.
ಐತಿಹಾಸಿಕ ಪುಟ ಸೇರಿದ ಹರಿಹರದ ಗಣೇಶೋತ್ಸವ
ಹರಿಹರದ ಗಣೇಶೋತ್ಸವದ ಇತಿಹಾಸದಲ್ಲಿ ಈ ವರ್ಷದ ಗಣೇಶ ವಿಸರ್ಜನಾ ಶೋಭಾಯಾತ್ರೆ ವಿಶೇಷ ಸ್ಥಾನ ಪಡೆದಿದೆ. ನಗರದ ಪ್ರಮುಖ ಗಣಪತಿಗಳನ್ನು ಒಂದೇ ದಿನ ಸಾಮೂಹಿಕವಾಗಿ ವಿಸರ್ಜಿಸುವ ಮೂಲಕ ನಡೆದ ಈ ಬೃಹತ್ ಶೋಭಾಯಾತ್ರೆ, ಹಿಂದೆಂದೂ ಕಾಣದಷ್ಟು ವಿಜೃಂಭಣೆಯಿಂದ ನಡೆಯಿತು.
ಇಡೀ ಹರಿಹರವೇ ಕೇಸರಿಮಯ :
ನಗರದ ಪೇಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಡಿಜೆ ಗಳ ಸಂಗೀತದ ತಾಳಕ್ಕೆ ಯುವಕರು, ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಂಭ್ರಮದಿಂದ ಹೆಜ್ಜೆ ಹಾಕಿದರು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಬಹುತೇಕರು ಕೇಸರಿ ಶಾಲು ಧರಿಸಿದ್ದರು. ನಗರದ ಪ್ರಮುಖ ರಸ್ತೆಗಳು ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದ್ದರಿಂದ ಇಡೀ ಹರಿಹರ ನಗರವೇ ಕೇಸರಿಮಯವಾಗಿ ಕಂಗೊಳಿಸಿತು.
ಶೋಭಾಯಾತ್ರೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಎಸ್.ಎಮ್.ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ ಹೆಚ್. ದಿನೇಶ್, ಸ್ವಾತಿ ಹನುಮಂತಪ್ಪ, ನಿತ್ಯಾನಂದ, ಸುಧಾ ಸೋಳಂಕಿ, ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎನ್.ಎಚ್.ಶ್ರೀನಿವಾಸ್ ನಂದಿಗಾವಿ, ಅಧ್ಯಕ್ಷ ಆರ್.ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಚಿನ್ ಕೊಂಡಜ್ಜಿ,ಖಜಾಂಚಿ ಬಸವರಾಜ್, ಗೌರವ ಸಲಹೆಗಾರ ಸಂತೋಷ್ ನೋಟದವರ, ಮಂಜುನಾಥ ರಟ್ಟಿಹಳ್ಳಿ, ಶೇಖರ ಗೌಡ ಪಾಟೀಲ್, ಕೃಷ್ಣ ರಾಜೋಳಿ, ಪ್ರಶಾಂತ್ ಹರ್ನೆ, ಚಂದನ್ ಮೂರ್ಕಲ್, ಶಿವು, ಅದ್ವೈತ್ ಶಾಸ್ತ್ರಿ, ಭರತ್,ಸಚಿನ್,ಮೊಬೈಲ್ ಶಿವು, ಆದಿತ್ಯ ಮೆಹರ್ವಾಡೆ, ಕಾರ್ತಿಕ್,ಯೋಗೇಶ್,ಸಾಮ್ರಾಟ್, ಸಂತೋಷ್ ಗುಡಿಮನಿ, ಅಣ್ಣಪ್ಪ ಲೋಕಿಕೆರೆ, ಜಿ.ಪಿ. ಸಂಜೀವ ಗೌಡ, ಶಿವು ಬೊಂದಿ, ಅರುಣ್ ಕುಮಾರ್, ತಿಪ್ಪೇಶ್, ಪಾಲಣ್ಣ, ವಿನಯ್, ವಿನಾಯಕ, ನಾರಾಯಣ ನಾಣಿ, ನಿಧಿ, ಚಂದ್ರಕಾಂತ ಗೌಡ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
*********** ಬಾಕ್ಸ್ ಕಾಲಂ ಗಾಗಿ. 1 **********
ನಗರದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರ ಮಹಾಪೂರ, ಕೇಸರಿ ಧ್ವಜಗಳಿಂದ ಅಲಂಕರಿಸಿದ ಪ್ರಮುಖ ರಸ್ತೆಗಳು, ಸಂಗೀತದ ಸಂಭ್ರಮ, ಧಾರ್ಮಿಕ ಘೋಷಣೆಗಳು, ಬೃಹತ್ ಮಹಾದ್ವಾರಗಳು, ಅನ್ನದಾಸೋಹ ಹಾಗೂ ಸಾರ್ವಜನಿಕರ ಸ್ವಯಂಪ್ರೇರಿತ ಸಹಕಾರ—ಇವೆಲ್ಲವೂ ಸೇರಿ ಹರಿಹರದ ಗಣೇಶೋತ್ಸವದ ಇತಿಹಾಸದಲ್ಲಿ ಈ ದಿನವನ್ನು ಸ್ಮರಣೀಯವಾಗಿಸಿತು.
ನಗರದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಇತಿಹಾಸದಲ್ಲಿ ಈ ವರ್ಷದ ಗಣೇಶ ವಿಸರ್ಜನಾ ಬೃಹತ್ ಶೋಭಾಯಾತ್ರೆ ಹೊಸ ಅಧ್ಯಾಯವನ್ನೇ ಬರೆದಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
*********** ಬಾಕ್ಸ್ ಕಾಲಂ ಗಾಗಿ. 2 **********
ಇಂದು ನಡೆದ ವಿಶೇಷ ಸಜ್ಜನ ಯಾತ್ರೆಯಲ್ಲಿ ಪೊಲೀಸ್ ಬಂದೋಬಸ್ಸು ಉತ್ತಮವಾಗಿತ್ತು ಒಬ್ಬ ಎಸ್ಪಿ,ಒಬ್ಬ ಏ ಎಸ್ ಪಿ, 3 ಜನ ಡಿ ವೈ ಎಸ್ ಪಿ,15 ಜನ ಸಿಪಿಐ,31 ಜನ ಪಿಎಸ್ಐಗಳು 54 ಜನ ಎ ಎಸ್ ಐ ಗಳು, 20 ಜನ ಮಹಿಳಾ ಪಿಸಿಗಳು, 100 ಜನ ಹೋಂ ಗಾರ್ಡ್ಸ್ ಗಳು,ಕೆ.ಎಸ್.ಆರ್.ಪಿ ಯ 5 ತಕಡಿಗಳು ಮತ್ತು ಡಿಎಆರ್ ನ 4 ತುಕಡಿಗಳು ಸೇರಿದಂತೆ ನಗರದಾದ್ಯಂತ 25ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಮತ್ತು 3ಕ್ಕೂ ಹೆಚ್ಚು ವಿಡಿಯೋ ಚಿತ್ರೀಕರಣದ ಜೊತೆಗೆ 2 ಡ್ರೋನ್ ಕ್ಯಾಮೆರಾಗಳ ಚಿತ್ರೀಕರಣ ಮಾಡುವ ವ್ಯವಸ್ಥೆ ಮಾಡಲಾಗಿತ್ತು.
*********** ಬಾಕ್ಸ್ ಕಾಲಂ ಗಾಗಿ. 3 **********
ಈ ಬಾರಿಯ ಶೋಭಾಯಾತ್ರೆಯಲ್ಲಿ ಎಂಟು ಡಿಜೆಗಳ ಅಬ್ಬರ ಹರಿಹರ ನಗರವನ್ನೇ ಸಂಭ್ರಮ ಮತ್ತು ಭಕ್ತಿ ನಾದದಲ್ಲಿ ಜನರನ್ನು ಮೊಳಗಿಸಿತು.ವಿಶೇಷವಾಗಿ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಆಯೋಜಿಸಿದ್ದ ಡಿಜೆಗಳಲ್ಲಿ ಮಹಿಳೆಯರು, ಮಕ್ಕಳು, ಯುವತಿಯರು ಹಾಗೂ ಮಹಾಮಾತೆಯರು ಸಹ ಭಕ್ತಿಪರಶರಾಗಿ ನೃತ್ಯ ಮಾಡುವ ಮೂಲಕ ರಾಜಭೀದಿ ಉತ್ಸವಕ್ಕೆ ಹೊಸ ಕಳೆಯನ್ನೇ ತಂದರು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ‘ಜೈ ಶ್ರೀರಾಮ್’, ‘ಜೈ ಜೈ ರಾಮ್’, ‘ಗಣೇಶೋತ್ಸವಕ್ಕೆ ಶುಭವಾಗಲಿ’, ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿದರು
