ದೇಶದ ಜೆನ್ ಝೀ ದಾರಿ ತಪ್ಪಿಲ್ಲ, ಕೇಂದ್ರ ಸರ್ಕಾರ ದಾರಿ ತಪ್ಪಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ ಹೇಳಿದ್ದಾರೆ.
ಹರಿಹರ:True Media Kannada ದಾವಣಗೆರೆಯಲ್ಲಿ ಭಾನುವಾರ ನಡೆದ ಸಮಾರಂಭವೊಂದರಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ
ಎ.ಎಚ್.ಶಿವಗೋಗಿಸ್ವಾಮಿ ಅವರು, ಸಂಸ್ಕಾರದ ಕೊರತೆಯಿಂದ ಜೆನ್ ಝೀ ತಲೆಮಾರು ದಾರಿ ತಪ್ಪಿದೆ, ಮಠಾಧೀಶರು,
ಹಿರಿಯರು ಮಾರ್ಗದರ್ಶನ ನೀಡಬೇಕೆಂದು ಹೇಳಿದ್ದಾರೆ.
ದಾರಿ ತಪ್ಪಿರುವ ಕೇಂದ್ರ ಸರ್ಕಾರವನ್ನು ಎಚ್ಚರಿಸಲು ಜೆನ್ ಝೀ ಸ್ವಯಂ ಪ್ರೇರಣೆಯಿಂದ ದೆಹಲಿಯ ಜಂತರ್
ಮಂತರ್ ನಲ್ಲಿ ಐತಿಹಾಸಿಕ ಹೋರಾಟವನ್ನು ಮಾಡಬೇಕಾಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 20ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು, 20
ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಹಾಗೂ ಅವರ ಪೋಷಕರು ಆತಂಕಕ್ಕೀಡಾದರು. ಇಂತಹ ದೊಡ್ಡ ದುರಂತ ನಡೆದರು
ಕೇಂದ್ರ ಸರ್ಕಾರ ತಪ್ಪಿತಸ್ಥರ ವಿರುದ್ಧ ಯಾವುದೆ ಕ್ರಮ ಕೈಗೊಳ್ಳದಿದ್ದಾಗ ದೇಶದ ಜೆನ್ ಝೀ ಸಿಡಿದೆದ್ದಿತು.
ಈ ಕುರಿತು ಪ್ರತಿ ಪಕ್ಷದವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗಲ್ಲ ಎಂದೆ ಪ್ರಧಾನಿ ನರೇಂದ್ರ ಮೋದಿ
ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಮುಂಗಾರು ಅಧಿವೇಶದಿಂದ ದೂರ ಉಳಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದು, ಪ್ರತಿ ಪ್ರಜೆಯ ಬ್ಯಾಂಕ್ ಖಾತೆಗೆ ರೂ. 15 ಲಕ್ಷ ಜಮೆ
ಮಾಡುವುದು, ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಕಪ್ಪುಹಣ ತರಿಸುವುದು ಸೇರಿದಂತೆ ಕೇಂದ್ರದ ಬಿಜೆಪಿ ಸರ್ಕಾರ
ಯುವ ಜನತೆಯ ಬದುಕಿಗೆ ಆಧಾರವಾಗುವ ಯಾವುದೆ ಭರವಸೆಗಳನ್ನು ಈಡೇರಿಸಿಲ್ಲ. ಬದಲಿಗೆ ಧರ್ಮ, ಜಾತಿ,
ಪಂಗಡದ ಹೆಸರಲ್ಲಿ ಸಂಘರ್ಷ ಉಂಟು ಮಾಡಿ ದೇಶದ ಯುವಜನರ ದಿಕ್ಕನ್ನು ತಪ್ಪಿಸುತ್ತಿದೆ.
ಜಗತ್ತಿನಲ್ಲಿ ಹೆಚ್ಚಿನ ಮಾನವ ಸಂಪನ್ಮೂಲ, ಅದರಲ್ಲೂ ಹೆಚ್ಚಿನ ಯುವಜನರನ್ನು ಹೊಂದಿರುವ
ದೇಶವಾಗಿರುವ ಭಾರತವನ್ನು ಜಗತ್ತಿನ ಶಕ್ತಿ ಶಾಲಿ ದೇಶವಾಗಿಸುವ ಬದಲು, ಅನ್ಯ ಧರ್ಮ, ಜಾತಿಯ ಹೆಸರಲ್ಲಿ
ಧ್ವೇಷಿಸುವುದಕ್ಕೆ ಪ್ರಚೋದನೆ ನೀಡಲಾಗುತ್ತಿದೆ.
ಗುಜರಾತಿನ ತಮ್ಮ ಆತ್ಮೀಯರಾದ ಅಂಬಾನಿ ಮತ್ತು ಗೌತಮ್ ಅದಾನಿಯವರ ಪ್ರಗತಿಯೆ ದೇಶದ ಪ್ರಗತಿ ಎಂಬ
ಭಾವನೆ ಕೇಂದ್ರ ಸರ್ಕಾರಕ್ಕಿದೆ. ಅವರಿಗೆ ಗುತ್ತಿಗೆ ಕೆಲಸ ಕೊಡಿಸಲು ಪ್ರಧಾನಿ ಮೋದಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆ.
ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಇಂದಿರಾಗಾಂಧಿ, ರಾಜೀವ್ ಗಾಂಧಿ,
ಮನಮೋಹನ ಸಿಂಗ್ರವರ ದೂರಗಾಮಿ ಆಡಳಿತದಿಂದಾಗಿ ಪ್ರಗತಿಯ ಪಥದಲ್ಲಿದ್ದ ಭಾರತವನ್ನು ಬಿಜೆಪಿ ಆಡಳಿತ 50
ವರ್ಷ ಹಿಂದಕ್ಕೆ ತಳ್ಳಿದೆ.
ಅಭಿವೃದ್ಧಿ ಎಂದರೆ ಏನೆಂಬ ಸಂಸ್ಕಾರ ಮೂಡಿಸಲು ದಾರಿ ತಪ್ಪಿರುವ ಕೇಂದ್ರ ಸರ್ಕಾರಕ್ಕೆ ಮಠಾಧೀಶರು, ಗುರು
ಹಿರಿಯರಿಂದ ಮಾರ್ಗದರ್ಶನ ಮಾಡಿಸುವ ಅಗತ್ಯವಿದೆಯೆ ಹೊರತು ದೇಶದ ಜೆನ್ ಝೀ ಗೆ ಅಲ್ಲಎಂದು ಅವರು
ಪ್ರತಿಪಾದಿಸಿದ್ದಾರೆ.
