ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಬಿ. ಹಾಲೇಶ್ಗೌಡ
ಹರಿಹರ True Media Kannada: ಸಾಲ ಪಡೆದು ಮರುಪಾವತಿ ಮಾಡದ ಸದಸ್ಯರು ಆದಷ್ಟು ಬೇಗ ಸಾಲ ಮರುಪಾವತಿಸುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡ ಮನವಿ ಮಾಡಿದರು.
ನಗರದ ಗುತ್ತೂರು ಕಾಲೋನಿ ಬಳಿಯ ಸತ್ಯ ಗಣಪತಿ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಹರಿಹರದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಸಂಘದ ವ್ಯಾಪ್ತಿಗೆ ಸೇರದಿದ್ದರೂ ಕೆಲವು ಶ್ರೀಶಕ್ತಿ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಗಿತ್ತು. ಆದರೆ ಈ ಬಾರಿ ಸಂಘದ ನಿಯಮದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಶ್ರೀಶಕ್ತಿ ಸಂಘಗಳಿಗೆ ಮಾತ್ರ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಸಂಘವು 2025-26ನೇ ಸಾಲಿನಲ್ಲಿ ₹13,51,232 ನಷ್ಟ ಅನುಭವಿಸಿದೆ. ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಮುಂದಿನ ದಿನಗಳಲ್ಲಿ ವ್ಯಾಪಾರ ಅಭಿ ವೃದ್ಧಿ ಯೋಜನೆಗಳನ್ನು ಹೆಚ್ಚಿಸಿ ಸಂಘದ ಲಾಭವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುವ, ಸಂಘಕ್ಕೆ ಲಾಭ ತರುವ ಯೋಜನೆಗಳ ಕುರಿತು ಸಲಹೆ-ಸೂಚನೆ ನೀಡಿದರೆ ಅವುಗಳನ್ನು ಪರಿಗಣಿಸಲಾಗುವುದು ಎಂದರು.
ಸಾಲ ಪಡೆದು ಮರುಪಾವತಿ ಮಾಡದೆ ಇರುವ ಸದಸ್ಯರು ಆದಷ್ಟು ಬೇಗ ಸಾಲ ತೀರಿಸಬೇಕು. ಸಂಘದ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾಗಿದ್ದು, ಮನೆ ಬಾಗಿಲಿಗೆ ನೋಟಿಸ್ ಬರುವ ಮುನ್ನವೇ ಸಾಲ ಮರುಪಾವತಿಸುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಹರಿಹರದ ಕ್ಷೇತ್ರಾಧಿಕಾರಿ ಎಚ್.ಸಿ. ಶಿವಕುಮಾರ್ ಮಾತನಾಡಿ, ಸಂಘದ ನಿಯಮಾವಳಿಯಂತೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ತಮ್ಮ ವ್ಯಾಪ್ತಿಗೆ ಬರುವ ಇತರೆ ಸಂಘಗಳಿಗೂ ನಿಯಮಾನುಸಾರ ಸಾಲ ಸೌಲಭ್ಯ ಕಲ್ಪಿಸಲು ಸಹಕರಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಡಾ. ಕೆ. ಜೈಮುನಿ, ನಿರ್ದೇಶಕರಾದ ಜಿ. ವೀರಯ್ಯ, ಮೆಸಾಕ್, ಹಿದಾಯತ್ ಉಲ್ಲಾ, ಬಸವರಾಜ್ ಬಾಳೇಮರದ್, ಟಿ. ಬಸವರಾಜ, ಸೈಯದ್ ಅಬ್ಬಾಸ್ ಅಲಿ, ರಾಮಚಂದ್ರಪ್ಪ, ಶ್ರೀಮತಿ ಗಂಗಮ್ಮ, ಶ್ರೀಮತಿ ಶಾಂತಮ್ಮ, ಪ್ರವೀಣ್ ಮಜ್ಗಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಕೆ. ಜೈಮುನಿ ಪ್ರಾರ್ಥನೆ ಸಲ್ಲಿಸಿದರು. ಗೌರವಪೂರ್ವಕವಾಗಿ ನಾಡಗೀತೆ ಹಾಗೂ ರೈತ ಗೀತೆ ಹಾಡಲಾಯಿತು. ನಗದು ಗುಮಾಸ್ತರಾದ ಶ್ರೀಮತಿ ಪ್ರೇಮ ಎಂ.ಎ. ವಾರ್ಷಿಕ ಪತ್ರಿಕೆಯನ್ನು ವಾಚಿಸಿದರು. 2025-26ನೇ ಸಾಲಿನ ತಾತ್ಕಾಲಿಕ ವಾರ್ಷಿಕ ಲೆಕ್ಕಪತ್ರವನ್ನು ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡ ಮಂಡಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಜಿ.ವಿ. ಕಾರ್ಯ ಕ್ರಮ ನಿರೂಪಿಸಿ, ವಂದನಾರ್ಪಣೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾರಾಟ ಗುಮಾಸ್ತ ಪರಶುರಾಮ, ಅಟೆಂಡರ್ ಬಿ. ಸಂತೋಷ್, ಪಿಗ್ಮಿ ಸಂಗ್ರಹಕಾರರಾದ ಕೆ.ಬಿ. ಚಂದ್ರಶೇಖರ್, ಎಸ್. ರಾಘವೇಂದ್ರ ಭಾಗವಹಿಸಿದ್ದರು.
