Harihara
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ
ಹರಿಹರ True Media Kannada : ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪರಸ್ಪರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಸಾಂಸ್ಕೃತಿಕ ಅಸ್ಮಿತೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಸ್ಮಿತೆ ಎನ್ನುವುದು ಕೇವಲ ಗುರುತಿನ ಸಂಕೇತವಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿದೆ ಎಂದರು. ಕನ್ನಡ ಭಾಷೆಯ ವೈಶಿಷ್ಟ್ಯವನ್ನು ಅದರ ಸಹಿಷ್ಣುತೆ, ವಿಶಾಲ ಮನೋಭಾವ ಮತ್ತು ವಿವಿಧ ಸಂಸ್ಕೃತಿಗಳನ್ನು ಒಳಗೊಳ್ಳುವ ಗುಣಗಳಲ್ಲಿ ಗುರುತಿಸಬಹುದು.ಕನ್ನಡದ ನೈಜ ಸೊಗಡು ಮತ್ತು ಜೀವಂತಿಕೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು ಭಾಷೆಗೂ ಧರ್ಮಕ್ಕೂ ಯಾವುದೇ ಸಂಬಂಧ ಕಲ್ಪಿಸಬಾರದು. ಭಾಷೆಯನ್ನು ಕೋಮುವಾದದ ದೃಷ್ಟಿಯಿಂದ ಬಳಸದೆ, ಜನರನ್ನು ಬೆಸೆಯುವ ಹಾಗೂ ಸಾಂಸ್ಕೃತಿಕ ಸಾಮರಸ್ಯವನ್ನು ಬೆಳೆಸುವ ಮಾಧ್ಯಮವಾಗಿ ನೋಡಬೇಕು.ಕನ್ನಡ ಮಾಧ್ಯಮ ದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ. ಕನ್ನಡ ಭಾಷೆ, ಕನ್ನಡ ಮಾಧ್ಯಮದ ಶಿಕ್ಷಣ ಹಾಗೂ ಕನ್ನಡಿಗರ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯವಾದ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ನಗರದ ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಬಿ.ರೇವಣನಾಯ್ಕ ತಮ್ಮ ವಿಶ್ಲೇಷಣೆಯಲ್ಲಿ ಕನ್ನಡ ಸಾಹಿತ್ಯವು ಕೇವಲ ಭಾಷೆ ಮತ್ತು ಅಭಿವ್ಯಕ್ತಿಗೆ ಸೀಮಿತವಾಗದೆ, ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳ ಚಿಂತನೆ ಗಳನ್ನು ಒಳಗೊಂಡಿದೆ. ಸಮಾಜದ ಸುಧಾರಣೆ, ಧಾರ್ಮಿಕ ಸಾಮರಸ್ಯ ಹಾಗೂ ಸಮಸಮಾಜ ನಿರ್ಮಾಣಕ್ಕೆ ಕನ್ನಡ ಸಾಹಿತ್ಯ ಮಹತ್ವದ ಕೊಡುಗೆ ನೀಡಿದೆ ಎಂದರು.
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡವು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಗಂಭೀರ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೊಂದಿದೆ. ಕನ್ನಡ ಸಾಹಿತ್ಯದ ವಚನ, ರಗಳೆ, ಷಟ್ಪದಿ, ಸ್ಕಂದ ಪುರಾಣ ಸೇರಿದಂತೆ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಲೌಕಿಕ ಮತ್ತು ಧಾರ್ಮಿಕ ಮೌಲ್ಯಗಳ ಸಮನ್ವಯವನ್ನು ಕಾಣಬಹುದು. ಈ ಸಾಹಿತ್ಯ ಪ್ರಕಾರಗಳು ಜನಜೀವನದ ಅನುಭವ, ಸಾಮಾಜಿಕ ವಾಸ್ತವ, ನೈತಿಕ ಚಿಂತನೆ ಹಾಗೂ ಬದುಕಿನ ಮೌಲ್ಯಗಳನ್ನು ಪರಿಣಾಮಕಾರಿ ಯಾಗಿ ಪ್ರತಿಬಿಂಬಿಸಿವೆ ಎಂದು ತಿಳಿಸಿದರು.
ಧಾರ್ಮಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಹಾಗೂ ಸಮಸಮಾಜದ ನಿರ್ಮಾಣದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಮಹತ್ವದ ಪಾತ್ರ ವಹಿಸಿವೆ. ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡಿದ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಕನ್ನಡವು ಕೇವಲ ಸಂವಹನದ ಭಾಷೆಯಾಗಿರದೆ, ಪ್ರತಿಯೊಬ್ಬರ ಅಂತರಂಗದ, ಮನದ ಹಾಗೂ ಮನೆಯ ಭಾಷೆಯಾಗಬೇಕು.
ಜ್ಞಾನ, ವಿಜ್ಞಾನ, ಆಚಾರ, ವಿಚಾರ ಮತ್ತು ಸಾಮಾಜಿಕ ಮೌಲ್ಯಗಳೊಂದಿಗೆ ಜನರ ಜೀವನಕ್ರಮವನ್ನು ರೂಪಿಸುವಲ್ಲಿ ಕನ್ನಡದ ಅನನ್ಯತೆ ಅಡಗಿದೆ. ಕನ್ನಡ ಸಾಹಿತ್ಯವು ಜನರ ವಿವೇಕವನ್ನು ಜಾಗೃತಗೊಳಿಸುವುದರ ಜೊತೆ ಮಾನವೀಯತೆ, ಸಮಾನತೆ ಮತ್ತು ಸಹಬಾಳ್ವೆಯ ಆಶಯಗಳನ್ನು ಬಿತ್ತುತ್ತದೆ. ಈ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಶಕುಂತಲಾ ಎನ್. ಮಾತನಾಡಿ ಕನ್ನಡ ಭಾಷೆಯ ಬೆಳವಣಿಗೆ, ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ವೇದಿಕೆಯಲ್ಲಿ ಸಾಹಿತಿ ಎಚ್.ಕೆ. ಕೊಟ್ರಪ್ಪ, ಕಾಳಿದಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಬಿ. ರಾಜಶೇಖರ್, ಯಶಸ್ವಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ ವೈ. ಕೃಷ್ಣಮೂರ್ತಿ, ಎಚ್. ನಿಜಗುಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಕನ್ನಡ ಜಾಗೃತಿಯ ಸದಸ್ಯರಾದ ಡಾ. ಮಂಜಣ್ಣ ಮಲ್ಲಯ್ಯ, ಎ. ರಿಯಾಜ್ ಅಹ್ಮದ್, ಕೆ.ಎಸ್. ವೀರೇಶ್ ಪ್ರಸಾದ್, ಎಲ್.ಬಿ. ಮಧುಕುಮಾರ್, ಎಸ್. ಸೌಮ್ಯ ಹಾಗೂ ರುದ್ರಾಕ್ಷಿಬಾಯಿ ಉಪಸ್ಥಿತರಿದ್ದರು.
ತತ್ವಪದಕಾರ ಹಾಗೂ ಜನಪದ ಗಾಯಕ ಪರಮೇಶ್ವರಪ್ಪ ಕತ್ತಿಗೆ ಪ್ರಾರ್ಥಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಗೌರಮ್ಮ ಎಸ್.ಎಂ. ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಸವಕಾರ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಯಶೋಧ ಆರ್. ವಂದಿಸಿದರು.
