ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ಟ ಬಂಧಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ
ಹರಿಹರ: ಮುಸ್ಲಿಮ್ ಧರ್ಮದ ಮಹಿಳೆಯರ ಅವಹೇಳನ ಮಾಡಿ ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಇವರನ್ನು ಬಂಧಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯರಿಗೆ ಮನವಿ ನೀಡಿದರು.
ನಂತರ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಶ್ರೀರಂಗ ಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಮಾತನಾಡಿ, ನೀಚ ಮನಸ್ಸಿನ, ಜನ ವಿರೋಧಿ ಕಲ್ಲಡ್ಕ ಪ್ರಭಾಕರ ಭಟ್ಟರ ಧ್ವೇಷ ಭಾಷಣದಿಂದ ಅಶಾಂತಿಯ ವಾತಾವರಣ ಸೃಷ್ಟಿಯಾಗಿ ಜೀವ ಹಾನಿಯೂ ಸಂಭವಿಸಬಹುದಾಗಿದೆ.
ಧ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ, ಆದರೂ ಕೂಡ ಪೊಲೀಸರು ಭಟ್ಟರ ವಿರುದ್ಧ ಯಾವುದೆ ಪ್ರಕರಣ ದಾಖಲಿಸಿಲ್ಲ.
ಮಹಿಳೆಯನ್ನು ಭಾರತ ಮಾತೆಗೆ ಹೋಲಿಸುವ ಸಂಸ್ಕøತಿ ಭಾರತೀಯರದ್ದಾಗಿದೆ, ಮೋದಿ ಪ್ರಧಾನಿಯಾದ ಮೇಲೆಯೆ ಮುಸ್ಲಿಮ್ ಮಹಿಳೆಯರಿಗೆ ಶಾಶ್ವತ ಪತಿ ಸಿಕ್ಕಿದ್ದಾನೆ ಎಂದು ಅವಹೇಳನ ಮಾಡಿದ್ದಾರೆ. ಸಾರ್ವಜನಿಕವಾಗಿ ಹೆಣ್ಣನ್ನು ತುಚ್ಛವಾಗಿ ಭಟ್ಟರು ಅವಮಾನಿಸಿರುವುದನ್ನು ಕದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದರು.
ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಿರುವಾಗ ರಾಜ್ಯದಲ್ಲಿ ಕೋಮು ಭಾವನೆ ಬಿತ್ತಿ, ವೈಷಮ್ಯ ಮೂಡಿಸುವ ಹಾಗೂ ಆ ಮೂಲಕ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡುವ ಕುತಂತ್ರ ಇದರಲ್ಲಡಗಿದೆ ಎಂದು ಸಂಘಟನೆ ಭಾವಿಸಿದೆ.
ಕಳೆದ ವರ್ಷ ನಡೆದ ವಿಧಾನಸಭೆ ಹೊಸ್ತಿಲಲ್ಲಿ ಹಿಜಾಬ್, ಹಲಾಲ್ ಕಟ್, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ವಿಷ ಬೀಜ ಬಿತ್ತಿ ರಾಜ್ಯದಲ್ಲಿ ಕಲಹ ಮೂಡಿಸುವಲ್ಲಿ ಭಟ್ಟರದ್ದೆ ಪಾತ್ರವಿದೆ. ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಭಟ್ಟರು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಭಟ್ಟರನ್ನು ಬಂಧಿಸಿ ಜೈಲಿನಲ್ಲಿಡಬೇಕೆಂದು ಅವರು ಆಗ್ರಹಿಸಿದರು.
ಹಿಂದೂ ನಾವೆಲ್ಲಾ ಒಂದು ಘೋಷಣೆ ಸಾರುವ ಆರ್ಎಸ್ಎಸ್ ಪರಿವಾರದವರು ದಲಿತರನ್ನು ಎಂದೂ ಹಿಂದೂವಾಗಿ ಪರಿಗಣಿಸಿಲ್ಲ. ಹಿಂದೂ ಧರ್ಮದ ಅಮಲನ್ನು ಹಚ್ಚಿ, ದಲಿತರಿಗೆ ಅನ್ಯ ಕೋಮಿನರೊಂದಿಗೆ ಹೊಡೆದಾಡಲು ಮಾತ್ರ ಬಳಸುತ್ತಾರೆ. ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಕ್ಷೌರ ಮಾಡಲು, ದೇವಸ್ಥಾನಗಳಿಗೆ ಪ್ರವೇಶಿಸಲು ನಿರಾಕರಿಸಿ ಅವಮಾನಿಸಲಾಗುತ್ತಿದೆ, ದಲಿತರು ಮರಣ ಹೊಂದಿದರೆ ಹೂಳಲು ಸೂಕ್ತ ಸ್ಮಶಾನವಿಲ್ಲ, ನದಿ, ಕೆರೆ, ಕಟ್ಟೆ, ರಸ್ತೆ ಬದಿ ಮೃತ ದಲಿತರ ಅಂತ್ಯ ಸಂಸ್ಕಾರ ನಡೆಸಬೇಕಿದೆ ಎಂದು ಆರೋಪಿಸಿದರು.
ಕಡ್ಲೆಗೊಂದಿ ಗ್ರಾಪಂ ಸದಸ್ಯೆ ಮಾತೆಂಗೆಮ್ಮ ತಿಮ್ಮಪ್ಪ, ಹನುಮಂತಪ್ಪ ಎಸ್.ಟಿ., ಜ್ಯೋತಿ, ಶೈಲ, ಸುನೀತಾ ಸಂಜೀವಪ್ಪ, ರುಕ್ಮಿಣಿ, ಮಾಗೋಡು ಹನುಮಕ್ಕ, ಶಾಂತಮ್ಮ ಮುಬೀನಾ, ಮಲ್ಲಮ್ಮ, ಗುಡ್ಡಪ್ಪ, ಪರುಶುರಾಮ, ಮರಿಯಮ್ಮ, ಕೊಟ್ರೇಶ್, ಶಂಷಾದ್, ಮುಬೀನಾಬಾನು, ನಾಗಮ್ಮ, ಹನುಮಕ್ಕ, ಗಂಗಮ್ಮ, ಶಾಹತಾಜ್ ಬಾನು, ಪುಷ್ಪ, ಶಕಂತಲಾ, ಭಾಗ್ಯಮ್ಮ, ಮಲ್ಲಮ್ಮ, ರತ್ನಮ್ಮ ಹಾಗೂ ಇತರರಿದ್ದರು.
ಹರಿಹರ: ಮುಸ್ಲಿಮ್ ಮಹಿಳೆಯರ ಅವಹೇಳನ ಮಾಡಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಇವರನ್ನು ಬಂಧಿಸಲು ಆಗ್ರಹಿಸಿ ಕದಸಂಸಯಿಂದ ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ ಇವರಿಗೆ ಮನವಿ ನೀಡಲಾಯಿತು.
