ಹರಿಹರ
ಗ್ರಾಮೀಣ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿದ ಕೃತಗ್ಯತಾ ಟ್ರಸ್ಟ್ ಕಾರ್ಯ ಶ್ಲಾಘನೀಯ
50 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ | ಮುಂದಿನ ಹಂತದಲ್ಲಿ ಮತ್ತಷ್ಟು ವಿದ್ಯಾರ್ಥಿನಿಯರಿಗೆ ಸೈಕಲ್ ನೀಡುವ ಭರವಸೆ
ಹರಿಹರ True Media Kannada: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿ, ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃತಗ್ಯತಾ ಟ್ರಸ್ಟ್ ಕೈಗೊಂಡಿರುವ ಸೇವಾ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಪಿ.ಹರೀಶ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಗುರುಭವನದಲ್ಲಿ ಶಿಕ್ಷಕರ ಸೇವಾ ವೇದಿಕೆ ಹಾಗೂ ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃತಗ್ಯತಾ ಟ್ರಸ್ಟ್ ತಾಲೂಕಿನಲ್ಲಿ ಈಗಾಗಲೇ ಪರಿಚಿತವಾಗಿದ್ದು, ಹಲವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಿದೆ.
ಟ್ರಸ್ಟ್ನ ಮುಖ್ಯಸ್ಥರಾದ ಅರುಣಾ ದಿವಾಕರ್ ಅವರು ನಮ್ಮ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ನಲಿಕಲಿ ಚೇರ್-ಟೇಬಲ್, ತಟ್ಟೆ-ಲೋಟ, ಶಾಲಾ ಬ್ಯಾಗ್, ನೋಟ್ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ವಿಜ್ಞಾನ ಕಿಟ್, ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ಗಳನ್ನು ವಿತರಿಸಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯದ ಕೊರತೆ ಇರುವ ಕಡೆ ಶೌಚಾಲಯ ನಿರ್ಮಿಸುವುದು, ನ್ಯಾಪ್ಕಿನ್ ವಿತರಣೆ ಹಾಗೂ ಶಾಲೆಗಳಿಗೆ ಪೀಠೋಪಕರಣಗಳನ್ನು ಒದಗಿಸುವ ಮೂಲಕ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಈ ಸೇವಾ ಮನೋಭಾವ ಮುಂದುವರಿದು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೂ ಪ್ರಯೋಜನವಾಗಲಿ ಎಂದು ಆಶಿಸಿದರು.
ಪ್ರಥಮ ಹಂತದಲ್ಲಿ ಸುಮಾರು 50 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಸೈಕಲ್ ನೀಡುವ ಯೋಜನೆಯು ತಮಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಸೈಕಲ್ ವಿತರಣಾ ಕಾರ್ಯಕ್ರಮವನ್ನು ನೆನಪಿಸುತ್ತದೆ. ಪ್ರಸ್ತುತ ಸರ್ಕಾರವೂ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸುವ ಯೋಜನೆಯನ್ನು ಪುನರಾರಂಭಿಸುವಂತಾಗಲಿ ಎಂದು ಹರೀಶ್ ಆಶಿಸಿದರು.
ಕೃತಗ್ಯತಾ ಟ್ರಸ್ಟ್ನ ಮುಖ್ಯಸ್ಥರಾದ ಅರುಣಾ ದಿವಾಕರ್ ಮಾತನಾಡಿ, ಟ್ರಸ್ಟ್ ವತಿಯಿಂದ ಹಲವು ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಸಾಮಗ್ರಿಗಳನ್ನು ನಿರಂತರವಾಗಿ ಒದಗಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಅಕ್ಕಪಕ್ಕದ ಗ್ರಾಮಗಳಿಂದ ನಡೆದುಕೊಂಡು ಶಾಲೆಗೆ ಬರುತ್ತಿರುವುದನ್ನು ಗಮನಿಸಿ, ಅವರಿಗೆ ಸೈಕಲ್ ಒದಗಿಸುವ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು.
ಶಾಲೆಯಿಂದ 3 ಕಿಲೋಮೀಟರ್ಗಿಂತ ಹೆಚ್ಚಿನ ದೂರದಿಂದ ನಡೆದುಕೊಂಡು ಬರುವ ಬಡ ವಿದ್ಯಾರ್ಥಿನಿಯರನ್ನು ಗುರುತಿಸಿ ಸೈಕಲ್ ನೀಡಲು ತೀರ್ಮಾನಿಸಲಾಗಿತ್ತು. ಶಿಕ್ಷಕರಾದ ಶರಣ್ ಕುಮಾರ್ ಹೆಗಡೆ ಹಾಗೂ ಅವರ ತಂಡದ ಸಹಕಾರದಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು 50 ವಿದ್ಯಾರ್ಥಿನಿಯರಿಗೆ ಸೈಕಲ್ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಮಾತನಾಡಿ, ಸೈಕಲ್ಗಳ ಸೌಲಭ್ಯ ದೊರೆತಿರುವ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ಸಮಯವನ್ನು ಉಳಿಸಿಕೊಂಡು ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಟ್ರಸ್ಟ್ನವರು ನೀಡಿರುವ ಸೈಕಲ್ ಸೌಲಭ್ಯ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃತಗ್ಯತಾ ಟ್ರಸ್ಟ್ ನ ಮುಖ್ಯಸ್ಥರಾದ ಅರುಣ ದಿವಾಕರ್ ರವರ ಪುತ್ರರು ಮತ್ತು ಟ್ರಸ್ಟಿಗಳಾದ ಆದಿತ್ಯ ಮತ್ತು ಕಿರಣ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಹೆಗಡೆ, ತಾಲೂಕು ಅಧ್ಯಕ್ಷ ಬಿ.ಎನ್. ವೀರಪ್ಪ, ಕಾರ್ಯದರ್ಶಿ ಜೆ.ಕೆ. ರಾಜು, ಖಜಾಂಚಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಪರಶುರಾಮ್, ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಪೀರೂ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ನಾಮನಿರ್ದೇಶಿತ ಉಪಾಧ್ಯಕ್ಷ ಹನುಮರೆಡ್ಡಿ ಟಿ.ಎಚ್., ಶಶಿಕುಮಾರ್, ಮುಸ್ತಾಕ್ ಅಹಮದ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಶ್ವಕ್ ಅಹ್ಮದ್, ಪತ್ತಿನ ಸಹಕಾರ ಸಂಘದ ಪ್ರವೀಣ್ ಕುಮಾರ್, ಆನಂದ ಭೂತ್ ರೆಡ್ಡಿ, ಕುವೇಂದ್ರಪ್ಪ, ಈಶಪ್ಪ ಬೂದಿಹಾಳ, ಕಸಾಪ ಅಧ್ಯಕ್ಷ ಮಂಜುನಾಥಯ್ಯ, ಎಕ್ಕೆಗುಂದಿ ರುದ್ರಗೌಡ, ಮಂಜುನಾಥ್ ಭಾನುವಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
