ಪ್ರತಿಭಟನೆಯನ್ನು ಹತ್ತಿಕ್ಕುವ ಹರಿಹರ ತಾಲ್ಲೂಕು ಆಡಳಿತ ಪ್ರಯತ್ನ- ಪಿ.ಜೆ.ಮಹಾಂತೇಶ್ ಆರೋಪ
ಹರಿಹರ: ಮೈಕ್ ಲೈಸೆನ್ಸ್ ರದ್ದು: ದಲಿತರ ಧ್ವನಿ ಅಡಗಿಸಲು ತಾಲ್ಲೂಕು ಆಡಳಿತ ಹುನ್ನಾರ
ಹರಿಹರ: ತಾಲ್ಲೂಕಿನ ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮಗಳ ನಿರ್ವಸತಿಕ ಮಾದಿಗ ಹಾಗೂ ಹಿಂದುಳಿದ ಸಮುದಾದವರಿಗೆ ವಸತಿ ಯೋಜೆ ಜಾರಿಗೊಳಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಯಿಂದ ಆಯೋಜಿಸಿರುವ ಧರಣಿ ಸತ್ಯಾಗ್ರಹ ಪ್ರತಿಭಟನೆಗೆ ನೀಡಿದ್ದ ಧ್ವನಿ ವರ್ಧಕ ಬಳಕೆ ಲೈಸೆನ್ಸ್ ರದ್ದು ಮಾಡಿರುವುದನ್ನು ಕದಸಂಸ ತಾಲ್ಲೂಕು ಘಟಕ ಖಂಡಿಸಿದೆ.
ಮಂಗಳವಾರದಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಎರಡೂ ಗ್ರಾಮಗಳ ನಿರ್ವಸತಿಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಭಾನುವಳ್ಳಿಯಿಂದ ಹರಿಹರದವರೆಗೆ ಪಾದಯಾತ್ರೆ, ವಿವಿಧ ಹಂತಗಳಲ್ಲಿ ಪ್ರತಿಭಟನೆ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ ಎಂದು ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ತಿಳಿಸಿದ್ದಾರೆ.
ಆದರೂ ತಾಲ್ಲೂಕು ಅಥವಾ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಈ ಎರಡೂ ಗ್ರಾಮಗಳಲ್ಲಿ ಇರುವ ಸರ್ಕಾರಿ ಜಾಗದಲ್ಲಿ ವಸತಿ ಯೋಜನೆ ರೂಪಿಸಲು ಸಾಧ್ಯವಿದ್ದು ಆದರೆ ಈ ಕುರಿತು ಸಂಬಂಧಿತ ಅಧಿಕಾರಿಗಳು ಮುಂದಾಗುತ್ತಿಲ್ಲ.
ಈ ವಿಷಯದಲ್ಲಿ ಯಾವುದೋ ಕಾಣದ ಕೈಗಳ ಪ್ರಭಾವಕ್ಕೆ ಒಳಗಾಗಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಆರಂಭದಿಂದಲೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಈ ಮಧ್ಯೆ ಬುಧವಾರದಂದು ಪೊಲೀಸರ ಮೂಲಕ ತಹಶೀಲ್ದಾರರು ಈ ಪ್ರತಿಭಟನೆಗೆ ನೀಡಿದ್ದ ಧ್ವನಿ ವರ್ಧಕ ಲೈಸೆನ್ಸ್ ರದ್ದು ಪಡಿಸಿದ್ದಾರೆ.
ಧ್ವನಿ ವರ್ಧಕ ಬಳಕೆಯ ಲೈಸೆನ್ಸ್ ಪಡೆದಿದ್ದರೂ ಸದರಿ ಪ್ರತಿಭಟನೆಯಲ್ಲಿ ಈವರೆಗೂ ಧ್ವನಿ ವರ್ಧಕ ಬಳಕೆ ಮಾಡಿಲ್ಲ, ಆದರೂ ಲೈಸೆನ್ಸ್ ರದ್ದು ಪಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು, ದಲಿತರು ಹಾಗೂ ಹಿಂದುಳಿದ ವರ್ಗದ ಬಡವರು ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿರುವ ದುಸ್ಥಿತಿ ಹಾಗೆಯೆ ಮುಂದುವರೆಯಲಿ ಎಂಬ ಭಾವನೆ ಅಧಿಕಾರಿಗಳಲ್ಲಿ ಇದೆ. ಹೀಗಾಗಿ ಪ್ರತಿಭಟನಾಕಾರರ, ದಲಿತರ ಧ್ವನಿ ಅಡಗಿಸಲು ತಾಲ್ಲೂಕು ಆಡಳಿತ ಇಂತಹ ಕ್ರಮಕೈಗೊಂಡಿದೆ.
ದಲಿತರ ಧ್ವನಿ ಅಡಗಿಸುವ, ಪ್ರತಿಭಟನೆಯನ್ನು ಹತ್ತಿಕ್ಕುವ ತಾಲ್ಲೂಕು ಆಡಳಿತದ ಪ್ರಯತ್ನ ಸಫಲವಾಗದು, ನ್ಯಾಯಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
