ಇಂದು ಟಗರು ಡಿಜೆ ಮತ್ತು ವಿಶೇಷ ವಾದ್ಯಗಳೊಂದಿಗೆ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ಗಣೇಶನ ವಿಸರ್ಜನೆ


ಹರಿಹರ : ನಗರದ ಗಾಂಧಿ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ಗಣೇಶನ ವಿಸರ್ಜನೆಯನ್ನು ಇಂದು ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಹಾಗು ನಗರಸಭೆ ಸದಸ್ಯ ಕೆ.ಜಿ.ಸಿದ್ದೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 60 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ನಗರದ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ 61ನೇ ವರ್ಷದ ಮಹೋತ್ಸವದ ಗಣೇಶ ವಿಸರ್ಜನೆ ಇಂದು ಅ.4 ರ ಬುಧವಾರ ನಗರದ ಪ್ರತಿಷ್ಠಿತ ಮಂಜು ಸೌಂಡ್ಸ್ ನ ಟಗರು ಡಿ.ಜೆ ಮತ್ತು ಸ್ಥಳೀಯ ಕಲಾವಿದರ ಕಲಾತಂಡಗಳ ವಾದ್ಯ ಮೇಳ ಗಳೊಂದಿಗೆ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಮಧ್ಯಾಹ್ನ 12.00 ಗಂಟೆಯಿಂದ ವಿಶೇಷವಾಗಿ ಅಲಂಕೃತ ಗಣೇಶ ಮೂರ್ತಿಯನ್ನು ಮೆರವಣಿಗೆ ನಗರದ ಮಹಾತ್ಮ ಗಾಂಧಿ ವೃತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಕೆಇಬಿ ಕಚೇರಿ ಮುಂಭಾಗದ ರಸ್ತೆಯ ಮೂಲಕ ಹಾದು ಉಳಿದ ಪ್ರಮುಖ ರಸ್ತೆಗಳಲ್ಲಿ ತೆರಳಿ ನಂತರ ರಾತ್ರಿ ಸುಮಾರು 10.00 ಗಂಟೆಯೊಳ ಗಾಗಿ ವಿನಾಯಕ ಮೂರ್ತಿಯನ್ನು ತುಂಗಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಈ ಬಾರಿ ವಿನಾಯಕ ಮಹೋತ್ಸವದಲ್ಲಿ ಭಾರತ ದೇಶದ ಇಸ್ರೋ ಸಂಸ್ಥೆಯ ಹೆಮ್ಮೆಯ ಸಾಧನೆಯಾದ ಚಂದ್ರಯಾನ-3 ರ ಪ್ರತಿರೂಪ ನಿರ್ಮಾಣ ಮಾಡಿ ಸುಮಾರು 15 ದಿನಗಳ ಕಾಲ ವಿಶೇಷ ಪ್ರದರ್ಶನವನ್ನು ಮಾಡಲಾಯಿತು.ಇದರಲ್ಲಿ ಚಂದ್ರಯಾನ ದ ವಿಶೇಷ ಮಾಹಿತಿಯನ್ನು ತರಬೇತು ಪಡೆದ ವಿದ್ಯಾರ್ಥಿಗಳ ತಂಡದಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. 13ನೇ ದಿನಕ್ಕೆ ವಿಸರ್ಜನೆ ಮಾಡಬೇಕೆಂದು ಅಂದುಕೊಂಡಿದ್ದ ಸಮಿತಿಯವರು ಸಾರ್ವಜನಿಕರ ಬೇಡಿಕೆಯ ಮೇರೆಗೆ 15 ದಿನಗಳ ಕಾಲ ಪ್ರದರ್ಶನ ನಡೆಸಿ 17ನೇ ದಿನವಾದ ಬುಧವಾರ ವಿಸರ್ಜನೆ ಮಾಡಲಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ನೋಟದ ಮಾತನಾಡಿ ನಾವುಗಳು ಈ ಬಾರಿಯ ಚಂದ್ರಯಾನ-3 ರ ಪ್ರದರ್ಶನದಲ್ಲಿ ತಾಲೂಕಿನ ಪ್ರತಿಯೊಂದು ಶಾಲೆಯ ವಿದ್ಯಾರ್ಥಿ ಗಳಿಗೆ ಚಂದ್ರಯಾನದ ಬಗ್ಗೆ ವಿಶೇಷ ಸ್ಪರ್ಧೆಯನ್ನು ಏರ್ಪಾಡು ಮಾಡಿ ವಿಜೇತ ಶಾಲೆಗಳಿಗೆ ಇಲ್ಲಿ ಸ್ಥಾಪಿಸಲಾದ ಚಂದ್ರಯಾನದ ಪ್ರತಿರೂಪಗಳನ್ನು ನೀಡಲು ತೀರ್ಮಾನಿಸಿದ್ದೆವು ಆದರೆ ಇದೇ ಸಮಯದಲ್ಲಿ ಎಲ್ಲಾ ಶಾಲೆಗಳ ಅರ್ಧ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಕಾರಣಕ್ಕಾಗಿ ಈ ವಿಚಾರವನ್ನು ಕೈ ಬಿಡಲಾಗಿದೆ. ಆದಾಗ್ಯೂ ಅರ್ಹತೆ ಇರುವ ಶಾಲೆಗಳನ್ನು ಹುಡುಕಿ ಪ್ರತಿರೂಪ ಗಳನ್ನು ಆ ಶಾಲೆಗೆ ನೀಡಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಮಂಜುನಾಥ್, ಕೆ.ಸಿ.ಕುಮಾರ್, ಕೊಂಡಜ್ಜಿ ಸಚಿನ್, ಪ್ರವೀಣ್ ಪವಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *