ಹರಿಹರ ನಗರ ಸಭೆಯ ಆಯ-ವ್ಯಯ 2024-25 ; 56.78 ಕೋಟಿ ಆದಾಯ ನಿರೀಕ್ಷೆಯ 4.79 ಲಕ್ಷ ರೂ, ಉಳಿತಾಯ ಬಜೆಟ್ ಮಂಡನೆ

True Media Kannada :-ಹರಿಹರ : ನಗರಸಭೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಸ್ವಂತ ಆದಾಯದಿಂದ 2024-25ನೇ ಸಾಲಿನ ಹಣಕಾಸಿನ ವರ್ಷಕ್ಕೆ ಒಟ್ಟು 64.06 ಕೋಟಿ(ಆರಂಭಿಕ ಶುಲ್ಕ 7.28 ಕೋಟಿ ಒಳಗೊಂಡoತೆ), ಆದಾಯವನ್ನು ನಿರೀಕ್ಷೆ ಮಾಡಿದ್ದು, 4.79 ಲಕ್ಷ ರೂಗಳ ಉಳಿತಾಯ ಆಯ-ವ್ಯಯ (ಬಜೆಟ್) ವನ್ನು ಹರಿಹರ ನಗರಸಭೆ ಆಡಳಿತಾಧಿಕಾರಿ ಹಾಗು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಂಡಿಸಿದರು.
     ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ 2024- 25 ನೇ ಸಾಲಿನ ಆಯ-ವ್ಯಯ ಮಂಡನೆ ಮಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿ ಕೊಳ್ಳಲಾಗಿದೆ.ಈ ಆದಾಯ ಮತ್ತು ಅನುದಾನವನ್ನ ಪ್ರಮುಖವಾಗಿ ಹರಿಹರ ನಗರದಲ್ಲಿ
* ಲಕ್ಷ ವೃಕ್ಷೇತ್ಸವ ಕಾರ್ಯಕ್ರಮ
* ಅಮೃತ್‌ ಸರೋವರ ನಿರ್ಮಾಣ
* ಪರಿಸರ ಸ್ನೇಹಿ ಅಂಗನವಾಡಿಗಳ ನಿರ್ಮಾಣ
* ಅಮೃತ್ ಸ್ಟಾಲ್ ನಿರ್ಮಾಣ
* ಪ್ರವಾಸೋದ್ಯಮ ತಾಣವಾಗಿ ಹರಿಹರ
* ಕೊಳವೆ ಬಾವಿಗಳ ಪುನಶ್ವೇತನ
* ಫುಡ್ ಕೊರ್ಟ್/ಫುಡ್ ಸ್ಟ್ರೀಟ್ ನಿರ್ಮಾಣ
* ಉದ್ಯಾನವನಗಳ ಅಭಿವೃದ್ಧಿ
* ಸ್ಮಶಾನಗಳ ಅಭಿವೃದ್ಧಿ
* ಜನರಿಗೆ 24/7ರಡಿ ಕುಡಿಯುವ ನೀರಿನ ಪೂರೈಕೆಗೆ ಕವಲೆತ್ತು ಹತ್ತಿರ ಜಮೀನು ಖರೀದಿಸಿ ನೀರು ಸಂಗ್ರಹಣೆ ಅಥವಾ ನದಿಗೆ ಕುಡಿಯುವ ನೀರಿಗಾಗಿ ತಡೆಗೊಡೆ ನಿರ್ಮಾಣ.
* ನಗರದ ಸೌಂದರ್ಯಕ್ಕಾಗಿ ಗೋಡೆ ಬರಹ
* ನಗರದ ನಾಲ್ಕು ಕಡೆ ಸ್ವಾಗತ ಕಮಾನು
* 31-ವಾರ್ಡ್‌ಗಳಲ್ಲಿನ ಎಲ್ಲಾ ಬೀದಿಗಳಿಗೆ ನಾಮಫಲಕಗಳನ್ನು ಅಳವಡಿಸುವುದು ಸೇರಿದಂತೆ ಇನ್ನೂ ಹತ್ತಾರು ವಿಚಾರಗಳಲ್ಲಿ ಅಭಿವೃದ್ಧಿಯ ಸಲುವಾಗಿ ಹರಿಹರ ನಗರದ ಸರ್ವಾಂಗಿಣವಾಗಿ ಅಭಿವೃದ್ಧಿಪಡಿಸುವ ರೂ. 4.79 ಲಕ್ಷಗಳ ಉಳಿತಾಯ ಬಜೆಟ್‌ ಹೊಂದಿರುವುದಾಗಿ ಜಿಲ್ಲಾಧಿಕಾರಿಗಳು ಮಂಡಿಸುವ ವೇಳೆ ತಿಳಿಸಿದರು.
    ನಗರದ ಜನತೆಯ ಕುಡಿಯುವ ನೀರಿನ ಉದ್ದೇಶಕಾಗಿ ನೀರು ಸಂಗ್ರಹಣೆಗೆ ಜಮೀನು ಖರೀದಿ ಸಲುವಾಗಿ 2.00 ಕೋಟಿ ರೂಗಳ ಅನುದಾನ, ನಗರದ ವ್ಯಾಪ್ತಿಯಲ್ಲಿ ಉದ್ಯಾನವನಗಳ ಅಭಿವೃದ್ಧಿ ಗಾಗಿ 1.20 ಕೋಟಿ ರೂ, ನಗರದ ವಿವಿಧ ಬಡಾವಣೆಗಳ ರಸ್ತೆ, ಚರಂಡಿ ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ 9.00 ಕೋಟಿ, ಅವಶ್ಯಕತೆ ಇರುವ ಹಾಗು ಹೊಸ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳಿಗೆ ಎಲ್ಇಡಿ ಬೀದಿದೀಪ,ಹೈ ಮಾಸ್ಟ್ ದೀಪಗಳ ಅಳವಡಿ ಕೆಗೆ 1.20 ಕೋಟಿ, ನಗರಸಭೆ ಕಚೇರಿ ಮುಂಭಾಗ ಹಾಗೂ ಇತರೆ ಪ್ರಮುಖ ರಸ್ತೆಗಳಿಗೆ ಫುಟ್ಬಾತ್ ನಿರ್ಮಾಣಕ್ಕಾಗಿ1.00 ಕೋಟಿ,ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಜಮೀನು ಖರೀದಿಗೆ 2.00 ಕೋಟಿ ರೂ, ಹೀಗೆ ಹತ್ತು ಹಲವು ಯೋಜನೆಗಳಿಗೆ ಅನುದಾನವನ್ನು ಮೀಸಲಿರಿಸುವುದಾಗಿ ವಿವರಣೆ ನೀಡಿದರು.
     ಬಜೆಟ್ ಮಂಡನಾ ಸಭೆಯಲ್ಲಿ ಭಾಗಿಯಾಗಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ ಉಳಿತಾಯ ಬಜೆಟ್ ಮಂಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಇನ್ನೇನು ಬೇಸಿಗೆ ಕಾಲ ಆರಂಭ ವಾಗುತ್ತಿದೆ ರೋಗ-ರುಜಿನೆಗಳು ಹರಡಲು ಶುರುವಾಗುತ್ತವೆ ಇದಕ್ಕೆ ತಕ್ಕ ಪೂರ್ವ ಸಿದ್ಧತೆಗಳನ್ನು ನಗರಸಭೆ ಮಾಡಿಕೊಳ್ಳಬೇಕಾಗಿದೆ. ಹರಿಹರ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಬಹಳಷ್ಟು ಇದೆ ಇದಕ್ಕೆ ಗಮನಹರಿಸಬೇಕು.
     ನಗರದ ಸ್ವಚ್ಛತೆ ಸೌಂದರ್ಯಕ್ಕೆ ಗಮನ ನೀಡಬೇಕು ಆದರೆ ಪೌರಕಾರ್ಮಿಕರುಗಳ ಸಂಖ್ಯೆ ಬಹಳ ಕಡಿಮೆ ಇದೆ. ಈ ಕೊರತೆ ಯನ್ನು ನೀಗಿಸುವ ಪ್ರಯತ್ನಗಳನ್ನು  ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸಕಲ ರೀತಿಯಲ್ಲಿ ಪ್ರಯತ್ನಗಳನ್ನು ಮಾಡ ಬೇಕಾಗಿದೆ ಇದಕ್ಕೆ ಸರ್ಕಾರ ಮಟ್ಟದಲ್ಲಿನ ಪ್ರಯತ್ನಗಳಿಗೆ ನನ್ನ ಸಹಕಾರವು ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.
     ಆಯ-ವ್ಯಯದಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡಬೇಕಾಗಿತ್ತು ಎಂಬ  ನ್ಯೂನತೆಯನ್ನು ಗಮನಿಸಲಾಗಿದೆ ಇದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಕ್ರೀಡೆಗೆ ಆದ್ಯತೆ ನೀಡಬೇಕು. ಉಳಿತಾಯ ಬಜೆಟ್ ಎಂದು ಈಗಾಗಲೇ ಮಂಡಿಸಿ ಯಾಗಿದೆ ಆದರೆ ಯಾವ ರೀತಿ ಜಾರಿಗೆ ಬರಲಿದೆ ಮತ್ತು ಕಾರ್ಯರೂಪಕ್ಕೆ ತರುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸ ಬೇಕಾಗಿದೆ ಎಂಬ ಕಿವಿ ಮಾತನ್ನು ಹೇಳಿದರು.
    ಇದೇ ವೇಳೆ ಹಿರಿಯ ಸದಸ್ಯ ಶಂಕರ್ ಕಟಾವ್ಕರ್ ಮಾತನಾಡಿ ಉಳಿತಾಯ ಬಜೆಟ್ ಘೋಷಣೆ ಮಾಡಿರುವುದು ನಮಗೆಲ್ಲರಿಗೂ ಸಂತಸ ತಂದಿದೆ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಹರಿಹರ ನಗರ ಸಭೆಯ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಸಹಕಾರವನ್ನು ನೀಡಬೇಕು ಜೊತೆಗೆ ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಶಾಖೆಯೊದನ್ನು ಹರಿಹರ ನಗರಸಭೆಯಲ್ಲಿ ಆರಂಭಿಸಬೇಕು ಎಂಬ ಮನವಿಯನ್ನು ಮಾಡಿದರು.
     ಸಭೆಯಲ್ಲಿ ಮತ್ತೋರ್ವ ಹಿರಿಯ ಸದಸ್ಯ ಎ.ವಾಮನ ಮೂರ್ತಿ ಮಾತನಾಡಿ ಆಯಾ-ವ್ಯಯದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಣೆಬೆನ್ನೂರು ತಾಲೂಕಿನ ಕೌಲೆತ್ತು ಗ್ರಾಮದಲ್ಲಿ ಜಮೀನು ಖರೀದಿಸುವ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. ಆದರೆ ಅದರ ಬದಲಿಗೆ ನಮ್ಮದೇ ತಾಲೂಕಿನ ರಾಜನಹಳ್ಳಿ ಗ್ರಾಮದ ಬಳಿ ಜಾಮೀನು ಖರೀದಿಸಿದರೆ ಉತ್ತಮವಾಗಲಿದೆ ಎಂಬ ಅಮೂಲ್ಯ ಸಲಹೆಯನ್ನು ನೀಡಿ ಉಳಿತಾಯ ಬಜೆಟ್ ಮಂಡನೆಗೆ ಸ್ವಾಗತ ಕೋರಿದರು.
     ಸದಸ್ಯ ಎ.ಕೆ.ಹನುಮಂತಪ್ಪ ಆಟೋ ಮಾತನಾಡಿ ನಿವೇಶನಗಳ ವಿತರಣೆ ಸಂದರ್ಭದಲ್ಲಿ ಪೌರಕಾರ್ಮಿಕರು ಬಡವರು ಸೇರಿದಂತೆ ಹಿಂದುಳಿದ ವರ್ಗದವರು ಹಾಗೂ ಇತರರನ್ನು ಗಮನದಲ್ಲಿರಿಸಿ ಕೊಂಡು ವಿತರಣೆ ಮಾಡಬೇಕು ಎಂಬ ಸಲಹೆಯನ್ನು ನೀಡಿದರು. ಬಜೆಟ್ ಮಂಡಲ ಸಭೆಯಲ್ಲಿ ನಗರಸಭೆಯ ಎಲ್ಲಾ ಸದಸ್ಯರು ಹಾಜರಾಗಿದ್ದರು.ಇದೇ ವೇಳೆ ನೂತನವಾಗಿ ಸರ್ಕಾರದಿಂದ ನೇಮಕ ವಾಗಿರುವ ನಾಮ ನಿರ್ದೇಶೀತ ಸದಸ್ಯರನ್ನು ಸ್ವಾಗತಿಸಲಾಯಿತು.
     ಈ ಸಮಯದಲ್ಲಿ ಜಿಲ್ಲಾ ಯೋಜನಾಧಿಕಾರಿ ಡಾ ಮಾಲತೇಶ ನಾಯಕ್,ಪೌರಾಯುಕ್ತ ಐ.ಬಸವರಾಜ್ ಸೇರಿದಂತೆ ನಗರಸಭೆಯ ಎಲ್ಲಾ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೆಲ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *