ಬಳ್ಳಾರಿ,ಏ.09: 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಹಾಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಹಿಂದಿನ ಸಿಇಒ ಡಾ.ಕೆ.ನಿತೀಶ್ ಸೇರಿದಂತೆ 8ಜನ ಅಧಿಕಾರಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಜಿಪಂ ಅಧ್ಯಕ್ಷೆ,ಜಿಪಂ ಸಿಇಒ,ಹಿಂದಿನ ಜಿಪಂ ಸಿಇಒ ಸೇರಿದಂತೆ 8ಜನ ಅಧಿಕಾರಿಗಳು ಪ್ರಶಸ್ತಿಗಳನ್ನು ಪಡೆದುಕೊಂಡರು.
ಅತ್ಯುತ್ತಮ ಜಿಪಂ ಪ್ರಶಸ್ತಿಗೆ ಬಳ್ಳಾರಿ ಜಿಪಂ ಪಾತ್ರವಾಗಿದ್ದು, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಈ ಹಿಂದಿನ ಜಿಪಂ ಸಿಇಒ ಪೂರ್ವಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್ ಕುಮಾರ್, ಜಿಪಂ ಹಾಲಿ ಸಿಇಒ ನಂದಿನಿ ಕೆ.ಆರ್ ಅವರು ಬಳ್ಳಾರಿ ಜಿಪಂ ವತಿಯಿಂದ ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದಲ್ಲಿ ಉತ್ತಮ ಯೋಜನಾ ನಿರ್ದೇಶಕರ/ಉಪ ಕಾರ್ಯದರ್ಶಿ ಪ್ರಶಸ್ತಿಯನ್ನು ಜಿಪಂ ಉಪಕಾರ್ಯದರ್ಶಿ ಅಮರೇಶ್ ನಾಯಕ್, ಜಿಲ್ಲಾ ಎಂಐಎಸ್ ಸಂಯೋಜಕರಾದ ಶಿವಪ್ರಸಾದ್ ರೆಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಮಡಗಿನ ಬಸಪ್ಪ, ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಯು.ಹೆಚ್.ಸೋಮಶೇಖರ್, ಜಿಲ್ಲೆಯ ಹರಪನಹಳ್ಳಿ ತಾಲೂಕು ಐಇಸಿ ಸಂಯೋಜಕರಾದ ಫಾಜಿಲ್ ಅಹಮದ್, ತಾಂತ್ರಿಕ ಸಂಯೋಕರಾದ ವಿಜಯ ಮಹಾಂತೇಶ, ಅತ್ಯುತ್ತಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿಗೆ ಜಿಲ್ಲೆಯ ಅಲಬೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಧವಿ ಅವರು ಸಚಿವರಿಂದ ಪ್ರಶಸ್ತಿ ಪ್ರತ್ರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯಿಂದ ಗೇಬಿಯನ್ ಮತ್ತು ಕಲ್ಲುಗುಂಡುಗಳ ತಡೆಗೋಡೆ ನಿರ್ಮಾಣದ ಕುರಿತು ವಸ್ತುಪ್ರದರ್ಶನ ಗಮನಸೆಳೆಯಿತು.
ಮನರೇಗಾ ಪರಿಣಾಮಕಾರಿ ಅನುಷ್ಠಾನ: ಬಳ್ಳಾರಿ ಜಿಪಂ ಅಧ್ಯಕ್ಷೆ,ಜಿಪಂ ಸಿಇಒಗಳು ಸೇರಿ 8 ಜನ ಅಧಿಕಾರಿಗಳಿಗೆ ಪ್ರಶಸ್ತಿ
