ಶಿವಮೊಗ್ಗ ಅಕ್ರಮ ಕಳ್ಳಭಟ್ಟಿ ವಶ-10ಪ್ರಕರಣ ದಾಖಲು

ಶಿವಮೊಗ್ಗ, ಆಗಸ್ಟ್ 19-ಅಬಕಾರಿ ಇಲಾಖೆಯು ನಕಲಿಮದ್ಯ ಉತ್ಪಾದನೆ ಮತ್ತು ಮಾರಾಟ ಜಾಲವನ್ನು ನಿಯಂತ್ರಿಸಿ, ಆರೋಗ್ಯ ಸಮಾಜವನ್ನು ನಿರ್ಮಿಸುವ ಸದುದ್ದೇಶದಿಂದ ಜಿಲ್ಲೆಯಲ್ಲಿ ಆಗಸ್ಟ್ 01ರಿಂದ 18ರವರೆಗೆ ಸುಮಾರು 89ದಿಡೀರ್ ದಾಳಿಗಳನ್ನು ನಡೆಸಿ, 10ಘೋರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಶಿವಮೊಗ್ಗದ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಕ್ಯಾ. ಅಜಿತ್‍ಕುಮಾರ್ ಜಿ ಎ, ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪೈಕಿ 65ಲೀ. ಕಳ್ಳಭಟ್ಟಿ ಸಾರಾಯಿ ಮತ್ತು 260ಲೀ. ಬೆಲ್ಲದಕೊಳೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ತಿಳಿಸಿರುವ ಅವರು, ಇತ್ತೀಚೆಗೆ ಪಂಜಾಬ್ ರಾಜ್ಯದಲ್ಲಿ ನಡೆದ ನಕಲಿ ಮದ್ಯ ದುರಂತದಂತಹ ದುರ್ಘಟನೆಗಳು ರಾಜ್ಯದಲ್ಲಿ ಸಂಭವಿಸದಂತೆ ಮಾನ್ಯ ಅಬಕಾರಿ ಸಚಿವರು ಮತ್ತು ಅಬಕಾರಿ ಆಯುಕ್ತರು ನೀಡಿದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಲಾಗಿದೆ ಅಲ್ಲದೆ ಜಿಲ್ಲೆಯ ಶಿಕಾರಿಪುರ, ಸೊರಬ ಮತ್ತು ಸಾಗರ ವಲಯಗಳ ವ್ಯಾಪ್ತಿಯಲ್ಲಿ ಪ್ರತಿದಿನ ದಾಳಿಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ಅಬಕಾರಿ ಉಪ ಅಧೀಕ್ಷಕರುಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ನಿಯೋಜಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯನ್ನು ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಹಾಗೂ ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *