ದಾವಣಗೆರೆ ಆ.13,ಕೊರೊನಾ ಸೋಂಕಿಗೆ ತುತ್ತಾದವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ, ಬೇಗನೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಲ್ಲಿ ಶೀಘ್ರವಾಗಿ ಗುಣಮುಖರಾಗಲು ಸಾಧ್ಯ. ಜಿಲ್ಲಾ ಚಿಗಟೇರಿ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಪ್ಯಾರಾಮೆಡಿಕಲ್ ತಂಡವು ಉತ್ತಮವಾದ ಚಿಕಿತ್ಸೆ ನೀಡುತ್ತಿದೆ. ಜೊತೆಗೆ ಗುಣಮಟ್ಟದ ಆಹಾರ, ಪೋಷಕಾಂಶ ಹೆಚ್ಚಿಸುವ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ನುಡಿದರು.
ಇಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ ಸಂದರ್ಭದಲ್ಲಿ ಮಾತನಾಡಿದ ಅವರು ಆಗಸ್ಟ್ 7 ರಂದು ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ತಜ್ಞ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳು ನೀಡಿದ ಉತ್ತಮ ಚಿಕಿತ್ಸೆಯಿಂದ ಗುಣಮುಖನಾಗಿದ್ದೇನೆ.

ನನಗೆ ಅಂತಹ ಕೋವಿಡ್ ಲಕ್ಷಣಗಳು ಇರಲಿಲ್ಲ. ವೈದ್ಯರು ಹೇಳಿದಂತೆ ಚಿಕಿತ್ಸೆ ಪಡೆದಿದ್ದು, ಪ್ರೊಟೊಕಾಲ್ ಪ್ರಕಾರ ಇಂದಿನಿಂದ ಹೋಮ್ ಕ್ವಾರಂಟೈನ್ ಆಗಲಿದ್ದೇನೆ. ಆಸ್ಪತ್ರೆಯ ಡಿ.ಎಸ್. ಡಾ.ನಾಗರಾಜ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಾ.ಶಶಿಧರ್, ಡಾ.ಹೇಮಂತ್, ಡಾ.ರವಿ, ಡಾ.ಗಿರೀಶ್ ಹೀಗೆ ನುರಿತ ತಜ್ಞ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಕೋವಿಡ್ ಚಿಕಿತ್ಸೆ ನೀಡುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆ ನೀಡುವ ತಜ್ಞ ವೈದ್ಯರ ತಂಡವೇ ಇದೆ. ಬಾಪೂಜಿ ಮತ್ತು ಎಸ್‍ಎಸ್ ಆಸ್ಪತ್ರೆಯ ತಜ್ಞ ವೈದ್ಯರೂ ಇಲ್ಲಿ ಚಿಕಿತ್ಸೆ ನೀಡುತ್ತಿದ್ದು, ಉತ್ತಮ ಆಹಾರ, ಹೆಚ್ಚುವರಿ ಪೋಷಕಾಂಶಗಳ ಔಷಧಿ ನೀಡಲಾಗುತ್ತಿದೆ.
ನಮ್ಮ ಸರ್ಕಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ ಹಾಗೂ ಜಿಲ್ಲಾಸ್ಪತ್ರೆಯ ವ್ಯವಸ್ಥೆಯನ್ನು ಅವಲೋಕಿಸುವ ದೃಷ್ಟಿಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ನಾನು ಆಯ್ಕೆ ಮಾಡಿದೆ. ವೈಯಕ್ತಿಕ ಅನುಭವ ಹೇಳಬೇಕೆಂದರೆ ಉತ್ತಮ ಚಿಕಿತ್ಸೆ ಮತ್ತು ಶುಶ್ರೂಷೆ ಲಭ್ಯವಾಗಿದೆ. ಎಲ್ಲ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಡ್‍ಗಳು ಸೇರಿದಂತೆ ಇತರೆ ಪೂರಕ ವ್ಯವಸ್ಥೆಗಳನ್ನು ಸದೃಢಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಮಲೇಬೆನ್ನೂರು ಪೊಲೀಸ್ ಠಾಣೆಯ ಎಹೆಚ್‍ಸಿ ಶಿವರಾಜ್, 41 ವರ್ಷಗಳು ಇವರು ಇಂದು ಬೆಳಿಗ್ಗೆ 3 ಗಂಟೆಗೆ ಕೋವಿಡ್‍ನಿಂದ ಮೃತಪಟ್ಟಿರುತ್ತಾರೆ. ಇವರಿಗೆ ಶುಗರ್, ಕಿಡ್ನಿ ಸಮಸ್ಯೆಗಳೂ ಇತ್ತು. ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಇದು ಮೊದಲನೇ ಕೋವಿಡ್‍ನಿಂದ ಸಂಭವಿಸಿದ ಮರಣವಾಗಿದೆ.
ಕೋವಿಡ್ ಸೋಂಕಿಗೆ ತುತ್ತಾದವರು ಯಾವುದೇ ರೀತಿಯಲ್ಲಿ ಆತಂತಕ್ಕೆ ಒಳಗಾಗಬಾರದು. ಧೈರ್ಯದಿಂದ ಇರಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಚತೆ ಮೂಲಕ ಕೋವಿಡ್‍ನಿಂದ ಪಾರಾಗಬಹುದು. ಒಂದು ಪಕ್ಷ ಪಾಸಿಟಿವ್ ಬಂದಲ್ಲಿ ಸಮರ್ಪಕವಾಗಿ ಸನ್ನಿವೇಶವನ್ನು ಎದುರಿಸಬೇಕೆಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಅತ್ಯಂತ ಪ್ರಮುಖ ಕೊರೊನಾ ವಾರಿಯರ್ ಆಗಿರುವ, ಇದೀಗ ಕೊರೊನಾ ವಿನ್ನರ್ ಆಗಿರುವ ಎಸ್‍ಪಿ ಯವರ ಆತ್ಮ ವಿಶ್ವಾಸದ ನಡೆ ಎಲ್ಲರಲ್ಲೂ ಧೈರ್ಯ ತುಂಬಿದೆ. ಎಸ್‍ಪಿಯವರು ಜಿಲ್ಲಾಸ್ಪತ್ರೆಯಲ್ಲಿನ ವಸ್ತುಸ್ಥತಿ, ನ್ಯೂನ್ಯತೆಗಳನ್ನು ಸರಿಪಡಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯನ್ನು ಆಯ್ಕೆ ಮಾಡಿದ್ದರು. ಚಿಗಟೇರಿ ಆಸ್ಪತ್ರೆ, ಜೆಜೆಎಂನ ತಜ್ಞ ವೈದ್ಯರ ತಂಡ, ಪಿಜಿ ಇನ್‍ಟನ್ರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ಉತ್ತಮ ಚಿಕಿತ್ಸೆ ಒದಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್‍ನ್ನು ಸಮರ್ಪಕವಾಗಿ ನಿರ್ವಹಿಸಿ ಮರಣ ಪ್ರಮಾಣ ತಗ್ಗಿಸಲು ಸರ್ವೇಕ್ಷಣೆಯನ್ನು ಇನ್ನಷ್ಟು ಚುರುಕುಗೊಳಿಸಿ, ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿ ಕೋವಿಡ್ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಕೋವಿಡ್‍ನಿಂದ ಪಾರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯವಾಗಿ ಮರಣ ಪ್ರಮಾಣ ತಗ್ಗಿಸಲು ಕೇವಲ ಟಾರ್ಗೆಟ್ ರೀಚ್ ಆಗಲು ಟೆಸ್ಟ್ ಮಾಡಲಾಗುತ್ತಿದೆಯೇ ಅಥವಾ ಡೆತ್ ಪಾಕೆಟ್ಸ್‍ಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಅನಾಲಿಸಿಸ್ ಮಾಡಿಸಿ, ಡೆತ್ ಪಾಕೆಟ್ಸ್‍ಗಳನ್ನು ಗುರುತಿಸಿ ಹೆಚ್ಚಿನ ಟೆಸ್ಟ್ ಮಾಡಿಸಿ, ಕೋವಿಡ್ ಸಾವಿನಿಂದ ಜನರನ್ನು ಪಾರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾರೂ ಕೋವಿಡ್‍ಗೆ ಹೆದರಿ ರೋಗಲಕ್ಷಣಗಳನ್ನು ಮುಚ್ಚಿಡಬಾರದು. ಗಾಬರಿ ಮತ್ತು ಆತಂಕಕ್ಕೀಡಾಗದೇ ಶೀಘ್ರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕೆಂದರು.
ಈ ವೇಳೆ ಜಿಲ್ಲಾಸ್ಪತ್ರೆಯ ಡಿಎಸ್ ಡಾ.ನಾಗರಾಜ್, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಇದ್ದರು.
