ಸ್ವಾತಂತ್ರ್ಯ ದಿನಾಚರಣೆ: ಹಂಪಿ ಬದಲು ವಡಕರಾಯನ ದೇವಸ್ಥಾನದಿಂದ ಸ್ವತಂತ್ರ ಜ್ಯೋತಿ ಮೆರವಣಿಗೆ

ಬಳ್ಳಾರಿ/ಹೊಸಪೇಟೆ,ಆ.05, ಕೋವಿಡ್-19 ತಡೆಗಟ್ಟುವ ಸಲುವಾಗಿ ಅವಿರತವಾಗಿ ಕಾರ್ಯನಿರ್ವಹಿಸಿ ಬದ್ಧತೆ ತೋರುತ್ತಿರುವ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೊಸಪೇಟೆ ತಾಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಹೆಚ್.ವಿಶ್ವನಾಥ್ ಅವರು ತಿಳಿಸಿದರು.
ತಾಲೂಕು ಕಚೇರಿಯ ಪತ್ರಿಕಾ ಭವನದಲ್ಲಿ ಬುಧವಾರದಂದು 74ನೇ ಸ್ವಾತಂತ್ರ ದಿನಾಚರಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ 74ನೇ ಸ್ವಾತಂತ್ರ ದಿನಾಚರಣೆಯನ್ನು ಕಟ್ಟುನಿಟ್ಟಾಗಿ, ಶಿಷ್ಠಾಚಾರದಿಂದ ಆಚರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ನಿಯಮಾವಳಿ ಅನ್ವಯ ಆಚರಿಸಲು ನಿರ್ಧರಿಸಲಾಗಿದ್ದು; ಈ ಕುರಿತು ಆ.4ರಂದು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಕರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ವ್ಯಕ್ತಿಯು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ಯಾನಿಟೈಸೇಷನ್, ಮಾಸ್ಕ್ ಕಡ್ಡಾಯವಾಗಿ ಹೊಂದಿರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು, ಧ್ವಜಾರೋಹಣ ದಿನ ಕಚೇರಿಯನ್ನು ಸ್ಯಾನಿಟೈಸೇಷನ್ ಜೊತೆಗೆ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್ ಒಳಪಡಿಸಬೇಕು. ಇಲಾಖಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೇರವೇರಿಸಿ ನಂತರ 9ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಪ್ರತಿಬಾರಿಯಂತೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುವುದು ಜೊತೆಗೆ ಸಾಮಾಜಿಕ ಅಂತರ ಪಾಲನೆ ಬಗ್ಗೆ ತಿಳಿಸಿಕೊಡುವುದು. ಕರೋನಾ ಪ್ರಕರಣಗಳು ತಾಲೂಕಿನಲ್ಲಿ ದಿನೇ ದಿನೇ ಹೆಚ್ಚಾಗುವ ಕಾರಣದಿಂದ ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ತರಲಾಗುವುದಿಲ್ಲ. ಪೊಲೀಸ್, ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಪರೇಡ್ ನಡೆಸಲಾಗುವುದು. ಈ ಬಾರಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ ಎಂದರು.
ಕರೋನಾ ಸೇವೆಗೆ ಸನ್ಮಾನ: ಕರೋನಾ ವೈರಾಣು ಹರಡುತ್ತಿರುವ ಹಿನ್ನಲೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಶಿಕ್ಷಣ, ಪೌರ ಕಾರ್ಮಿಕರು ಸೇರಿದಂತೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದು ಎಂದರು.
ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕ್ರೀಡಾಂಗಣಕ್ಕೆ ಜ್ಯೋತಿ ತರುವ ಪದ್ಧತಿ ಇತ್ತು. ಕರೋನಾ ಕಾರಣದಿಂದ ಸಾಮಾಜಿಕ ಅಂತರ ಪರಿಪಾಲನೆ ಉದ್ದೇಶದಿಂದ ಹೊಸಪೇಟೆಯ ವಡಕರಾಯನ ದೇವಸ್ಥಾನದಿಂದ ಕೇವಲ 5 ರಿಂದ 6 ಜನ ಮಾತ್ರ ಸ್ವಾತಂತ್ರ್ಯ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದು ಸಂಪ್ರದಾಯವನ್ನು ಮುಂದುವರೆಸಿ ಎಂದು ಸಭೆಗೆ ಆಗಮಿಸಿದ್ದ ಸ್ಪೂರ್ತಿ ವೇದಿಕೆಯ ಸದಸ್ಯರಿಗೆ ತಿಳಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅವರು ಮಾತನಾಡಿದರು.
ನಗರಸಭೆ ಪೌರಾಯುಕ್ತರಾದ ಜಯಲಕ್ಷ್ಮೀ ಅವರು ಮಾತನಾಡಿ ನಗರದ ಹೊರವಲಯ ಹಾಗೂ ಹೆದ್ದಾರಿ ಬಳಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ನಗರದಲ್ಲಿ ಹೆಚ್ಚಿನ ಪ್ರಮಾಣದ ಶುದ್ಧಗಾಳಿ ಲಭಿಸಲಿದೆ, ನಗರಸಭೆಯೊಂದಿಗೆ ಸ್ವಯಂ ಸೇವಾ ಸಂಘಗಳು ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ನಗರದ ಸ್ವಚ್ಚತೆ ಹಾಗೂ ಕೋವಿಡ್-19 ನಿವಾರಣೆಗೆ ಪೌರಕಾರ್ಮಿಕರು ಶ್ರಮಿಸಿದ್ದು ಅವರಿಗೂ ಸನ್ಮಾನ ನಡೆಸಬೇಕು ಎಂದರು.
ಕಾರ್ಯಕ್ರಮದ ಕೊನೆಗೆ ತಹಶೀಲ್ದಾರರು ಪೊಲೀಸ್ ಇಲಾಖೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿಗಳು ಕೋವಿಡ್-19 ನಿವಾರಣಾ ಸೇವೆಯಲ್ಲಿಯೇ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೂ ಸನ್ಮಾನ ಜೊತೆಗೆ ಪೌರ ಕಾರ್ಮಿಕರಿಗೆ ತಾಲೂಕು ಆಡಳಿತದ ವತಿಯಿಂದ ಸ್ವೆಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ರಮೇಶ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

 

Leave a Reply

Your email address will not be published. Required fields are marked *