ಏ-15-2021, www.truemediakannada.in-ದಾವಣಗೆರೆ-ಕನ್ನಡ ಬಾರದ ಸರ್ಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಹಯೋಗದೊಂದಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ ನೀಡುವ ಯೋಜನೆ ಜಾರಿಗೊಳಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನವೆಂಬರ್ 01, 1985 ರಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲ ಸರ್ಕಾರಿ ನೌಕರರಿಗಾಗಿ ಹನ್ನೆರೆಡು ತಿಂಗಳುಗಳು ಅಂಚೆ ಮೂಲಕ ಕನ್ನಡ ಕಲಿಸುವ ಯೋಜನೆಯಿದೆ. ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲ ನಗರಸಭೆ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ, ಕೆಎಸ್‍ಆರ್‍ಟಿಸಿ, ವಿಶ್ವವಿದ್ಯಾನಿಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಸಹ ನೋಂದಣಿ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗಿನ ಅವರ ಕಚೇರಿ ಗೈರುಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿನಾಯಿತಿಯಿದೆ.
ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯನ್ನು ಸಾರ್ವಜನಿಕರಿಗೂ ವಿಸ್ತರಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ರ್ತೀಣರಾಗಿರಬೇಕು ಹಾಗೂ ವಯೋಮಿತಿ 18 ರಿಂದ 60 ವಯಸ್ಸಿನ ಒಳಗಿರಬೇಕು. ಆಸ್ತಕರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ ರೂ.250 ಡಿಮ್ಯಾಂಡ್ ಡ್ರಾಪ್ಟನ್ನು ಕಳುಹಿಸಿಕೊಡಬೇಕು. ನೋಂದಾಯಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆ ನಡೆಸಲಾಗುವುದು.
ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು-570006, ಇವರಿಗೆ ಅಂಚೆ ಮೂಲಕ ಐದು ರೂಪಾಯಿಯ ಅಂಚೆ ಚೀಟಿಯನ್ನು ಹಚ್ಚಿದ ಸ್ವವಿಳಾಸ ಒಳಗೊಂಡ ಲಕೋಟೆಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಪ್ರಭಾರಿ ಅಧಿಕಾರಿಯವರಿಗೆ ಏ. 30 ರ ಒಳಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
