ಶಿವಮೊಗ್ಗ ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮತ್ಸ್ಯ ಸಂಪದ ಯೋಜನೆ ಸಮರ್ಪಕ ಬಳಕೆ: ಅಪರ ಜಿಲ್ಲಾಧಿಕಾರಿ ಜಿ.ಅನುರಾಧ

ಶಿವಮೊಗ್ಗ, ಜು.22,ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಟಾನಗೊಳಿಸಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗರಿಷ್ಟ ಲಾಭ ಪಡೆದುಕೊಂಡು ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಯೋಜನೆಯಾಗಿದ್ದು, 2020-2025 ವರೆಗಿನ ಪಂಚವಾರ್ಷಿಕ ಯೋಜನೆಯಾಗಿರುತ್ತದೆ. ಜಿಲ್ಲೆಯಲ್ಲಿ ಬೃಹತ್ ಜಲಾಶಯಗಳಿದ್ದು, ಒಳನಾಡು ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ. ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮೀನು ಮರಿ ಉತ್ಪಾದನೆ, ಹೊಸ ತಂತ್ರಜ್ಞಾನ ಅಳವಡಿಕೆ, ಮೀನುಗಾರಿಕೆ ಮೂಲಭೂತ ಸೌಕರ್ಯ ಕಲ್ಪಿಸುವುದು, ಮೀನು ಮಾರುಕಟ್ಟೆಗಳ ನಿರ್ಮಾಣ, ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಬೆಂಬಲ ನೀಡುವುದು, ಮೀನುಗಾರಿಕಾ ತರಬೇತಿ ನೀಡಲು ಸಾಧ್ಯವಿದೆ. ಈ ಕುರಿತು ಮೀನುಗಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ತಿಳಿಸಿದರು.
2020-21ನೇ ಸಾಲಿಗೆ ಒಟ್ಟು ರೂ.3.13 ಕೋಟಿ ಯೋಜನಾ ವೆಚ್ಚದೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೀನುಮರಿ ಪಾಲನೆ ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ ರೂ. 11 ಲಕ್ಷವಿದ್ದು ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳೆಯರಿಗೆ ಶೇ.60 ಸಹಾಯಧನವಿರುತ್ತದೆ. ಮೀನು ಕೃಷಿಕೊಳ ನಿರ್ಮಾಣ, ಸಾರಯುಕ್ತ ಮಣ್ಣಿನಲ್ಲಿ ಮೀನು ಉತ್ಪಾದನಾ ಕೊಳ ನಿರ್ಮಾಣ, ಮೀನು ಸಾಕಾಣಿಕೆಗೆ ಹೂಡಿಕೆ ಸಹಾಯ, ಬಯೋಪ್ಲಾಕ್ ಕೊಳ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಗಾತ್ರದ ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರ ನಿರ್ಮಾಣ, ರೀಸಕ್ರ್ಯೂಲೇಟರಿ ಅಕ್ವಕಲ್ಚರ್ ಸಿಸ್ಟಂ ನಿರ್ಮಾಣ, ಜಲಾಶಯಗಳಲ್ಲಿ ಕೇಜ್ಗಳ ಸ್ಥಾಪನೆ, ಜಲಾಶಯಗಳಲ್ಲಿ ಪೆನ್ಕಲ್ಚರ್ ನಿರ್ಮಾಣ, ಮಂಜುಗಡ್ಡೆ ಉತ್ಪಾದನಾ ಕಾರ್ಖಾನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೆಫ್ರಿಜರೇಟರ್ ವಾಹನ, ಇನ್ಸುಲೇಟೇಡ್ ವಾಹನ, ಮೋಟಾರ್ ಸೈಕಲ್ ಐಸ್ ಬಾಕ್ಸ್ ಖರೀದಿ, ಸೈಕಲ್ ಮತ್ತು ಐಸ್ಬಾಕ್ಸ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ನಿರ್ಮಾಣ, ಮೀನು ಆರೋಗ್ಯ ತಪಾಸಣಾ ಪ್ರಯೋಗಾಲಯಗಳ ಸ್ಥಾಪನೆ, ಮೊಬೈಲ್ ಕ್ಲಿನಿಕ್ ಲ್ಯಾಬ್ಗಳು ಹಾಗೂ ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಒತ್ತು ನೀಡುವುದು, ಮೀನುಗಾರರಿಗೆ ಜೀವ ವಿಮಾ ಸೌಲಭ್ಯ ಕ್ರಿಯಾ ಯೋಜನೆಯಲ್ಲಿ ಕಲ್ಪಿಸಿರುವುದಾಗಿ ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಕ್ಷರಿ ಅವರು ಸಭೆಗೆ ತಿಳಿಸಿದರು
ಮೀನುಗಾರರು, ಮೀನುಕೃಷಿಕರು, ಮೀನು ಮಾರಾಟಗಾರರು, ಸ್ವಸಹಾಯ ಸಂಘಗಳು, ಮೀನುಗಾರಿಕೆ ಸಹಕಾರ ಸಂಘಗಳು, ಖಾಸಗಿ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಗಸ್ಟ್ 5ರ ಒಳಗಾಗಿ ತಾಲ್ಲೂಕು ಮೀನುಗಾರಿಕೆ ಇಲಾಖೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮತ್ತು ತಾಲ್ಲೂಕು ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಕಛೇರಿಗೆ ಹಾಗೂ ಇಲಾಖಾ ಜಾಲತಾಣವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *