ದಾವಣಗೆರೆ ಜು.22,ತಾಲ್ಲೂಕು ಕೇಂದ್ರಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯನ್ನು ಮಾಡಲು ಕೆಲ ಅಧಿಕಾರಿಗಳ ಬದಲಾವಣೆಯೊಂದಿಗೆ ಉತ್ತಮ ತಂಡಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹರಿಹರ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿರ್ವಹಣೆ ಆಗಬೇಕು ಎಂದರು.
ಈ ನಿಟ್ಟಿನಲ್ಲಿ ಕೆಲ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳ ಬದಲಾವಣೆ ಬಗ್ಗೆ ಡಿಹೆಚ್‍ಓ ಮತ್ತು ಡಿಎಸ್‍ಓ ಜೊತೆ ಚರ್ಚಿಸಿ, ಸೂಕ್ತ ವೈದ್ಯರನ್ನು ನೇಮಿಸುವಂತೆ ತಿಳಿಸಿದ ಅವರು, ಕೋವಿಡ್ ನಿರ್ವಹಣೆ ಕುರಿತು ತಾಲ್ಲೂಕುಗಳಲ್ಲಿ ಉತ್ತಮ ತಂಡಗಳನ್ನು ರಚಿಸಬೇಕು ಎಂದು ಸೂಚನೆ ನೀಡಿದರು. ಜೊತೆಗೆ ಕಂಟೈನ್‍ಮೆಂಟ್ ವಲಯಗಳಲ್ಲಿ ಇನ್ಸಿಡೆಂಟ್ ಕಮಾಂಡರ್‍ಗಳು ಸಹ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದರು.
ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾದ್ಯಂತ ಹೋಂ ಐಸೋಲೇಷನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳಲು ಒಂದೊಂದು ತಂಡ ರಚಿಸುವಂತೆ ಡಿಹೆಚ್‍ಓ ಮತ್ತು ಡಿಎಸ್‍ಓ ರವರಿಗೆ ತಿಳಿಸಿದರು.
ಎಸ್‍ಎಸ್ ಮತ್ತು ಜೆಜೆಎಂ ಮೆಡಿಕಲ್ ಕಾಲೇಜಿನ ಲ್ಯಾಬ್‍ಗಳಲ್ಲಿ ಕೋವಿಡ್ ಪರೀಕ್ಷೆ ವರದಿಗಳನ್ನು ಐಸಿಎಂಆರ್ ಪೋರ್ಟಲ್‍ಗೆ ಅಪ್‍ಡೇಟ್ ಮಾಡುವುದು ತಡವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಆಡಳಿತಾಧಿಕಾರಿಗಳು ಕ್ರಮ ಕೈಗೊಂಡು ವಿಳಂಬ ಆಗದಂತೆ ಕ್ರಮ ವಹಿಸಬೇಕು. ವಿಳಂಬ ಆಗದಂತೆ ಕ್ರಮ ವಹಿಸಲು ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೀಡಲಾಗುವುದು ಎಂದ ಅವರು ಪರೀಕ್ಷೆಗಳನ್ನು ಮಾಡುವುದು ಬಾಕಿ ಉಳಿಸಿಕೊಳ್ಳಬಾರದೆಂದು ತಿಳಿಸಿದರು.
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯವಿರುವ ವೈದ್ಯರನ್ನು ನೇಮಿಸಿಕೊಳ್ಳುವ ಸಂಬಂಧ ಇತ್ತೀಚೆಗೆ ಪಿಜಿ ಮುಗಿಸಿದವರನ್ನು ವೈದ್ಯರಾಗಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಅವಶ್ಯಕತೆ ಇದ್ದರೆ ನೇಮಿಸಿಕೊಳ್ಳುವಂತೆ ಡಿಹೆಚ್‍ಓ ಗೆ ಸೂಚಿಸಿದರು.
ಕೋವಿಡ್ ಸಾವಿನ ಸಂಖ್ಯೆ ಕಡಿತಗೊಳಿಸಲು ಕ್ರಮ : ಕೋವಿಡ್‍ನಿಂದ ಉಂಟಾಗುವ ಸಾವಿನ ಪ್ರಮಾಣ ತಗ್ಗಿಸಲು ಡಿಎಸ್‍ಓ ರವರು ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿಯೂ ಇತರೆಡೆ ಸರ್ವೇ ಮಾಡಿಸಿ ದುರ್ಬಲ ವರ್ಗದವರ ತಪಾಸಣೆ ನಡೆಸಬೇಕು. ಗ್ರಾಮೀಣ ಮತ್ತು ನಗರ ಮಟ್ಟದ ಗ್ರಾಮೀಣ ಟಾಸ್ಕ್‍ಫೋರ್ಸ್ ಮತ್ತು ವಾರ್ಡ್, ಬೂತ್ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳು ಪರಿಣಾಮಕಾರಿಯಾಗಿ ಕೋವಿಡ್ ನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 49 ಆಂಬುಲೆನ್ಸ್‍ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಆಂಬುಲೆನ್ಸ್‍ಗಳ ಕೊರತೆ ಕಂಡುಬಂದಲ್ಲಿ ತಾಲ್ಲೂಕು ಅಧಿಕಾರಿಗಳು ತಿಳಿಸಬೇಕು. ಚಿಗಟೇರಿ ಆಸ್ಪತ್ರೆಯಲ್ಲಿ 12 ಹೈಫ್ಲೋ ನೇಸಲ್ ಆಕ್ಸಿಜನ್ ವ್ಯವಸ್ಥೆ ಇದ್ದು, 125 ಬೆಡ್‍ಗಳಿಗೆ ಆಕ್ಸಿಜನ್ ಪಾಯಿಂಟ್‍ಗಳಿದ್ದು, 50 ಬೆಡ್‍ಗಳಲ್ಲಿ ಸೇವೆ ನೀಡಲಾಗುತ್ತಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‍ಗಳನ್ನು ಕೋವಿಡ್‍ಗಾಗಿ ಗುರುತಿಸಲಾಗಿದ್ದು, ಅಲ್ಲ ಸಹ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಕೋವಿಡ್ ರೋಗಿಗೆ ತೊಂದರೆಯಾಗದಂತೆ ಆರೋಗ್ಯಾಧಿಕಾರಿಗಳು ಕ್ರಮ ಜರುಗಿಸಬೇಕೆಂದರು.
ಕೋವಿಡ್ ಲಕ್ಷಣ ಇರುವವರ ಟೆಸ್ಟ್‍ಗೆ ಒತ್ತು ನೀಡುವುದು : ಲಕ್ಷಣ ಇಲ್ಲದವರೆಲ್ಲರ ಕೋವಿಡ್ ಪರೀಕ್ಷೆ ಮಾಡಿಸುವ ಬದಲು ಲಕ್ಷಣ ಇದ್ದವರ ಟೆಸ್ಟ್ ಮಾಡಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ಗಂಗಾಧರ್, ಎಸ್‍ಎಸ್‍ಐಎಂಎಸ್ ನ ವೈದ್ಯಕೀಯ ನಿರ್ದೇಶಕ ಡಾ.ಕಾಳಪ್ಪನವರ್, ಡಾ. ಪ್ರಸಾದ್, ಜೆಜೆಎಂ ಕಾಲೇಜಿನ ಮುಖ್ಯಸ್ಥರು, ಇತರೆ ಅಧಿಕಾರಿಗಳು ಹಾಜರಿದ್ದರು.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ
