ರಾಗಿಗುಡ್ಡದಲ್ಲಿ 20ಎಕ್ರೆ ಪ್ರದೇಶದಲ್ಲಿ ಜೈವಿಕ ವನ ಅಭಿವೃದ್ಧಿಗೆ ಯೋಜನೆ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಆ.12, ಶಿವಮೊಗ್ಗ ನಗರದಲ್ಲಿರುವ ರಾಗಿಗುಡ್ಡದಲ್ಲಿ ಲಭ್ಯವಿರುವ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕ ವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಹಸಿರೀಕರಣಕ್ಕಾಗಿ 3.86ಕೋಟಿ ರೂ. ಮೀಸಲಿರಿಸಲಾಗಿದ್ದು, ಇದನ್ನು ಬಳಸಿಕೊಂಡು ಜೈವಿಕ ವನ ಅಭಿವೃದ್ಧಿಪಡಿಲು ಉದ್ದೇಶಿಸಲಾಗಿದೆ. ಮಲೆನಾಡಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಸಸಿಗಳನ್ನು ಬಳಸಿಕೊಂಡು ವನ ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಇದರಲ್ಲಿ ಮುಂದಿನ ಐದು ವರ್ಷಗಳ ನಿರ್ವಹಣೆಯೂ ಸೇರಿರಬೇಕು. ಒಟ್ಟು 7ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ರಾಗಿಗುಡ್ಡದ 112 ಸರ್ವೆ ನಂಬರಿನಲ್ಲಿ ಒಟ್ಟು 69ಎಕ್ರೆ ಜಮೀನು ಇದ್ದು, ಇದರಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 43ಎಕ್ರೆ ಈಗಾಗಲೇ ಮಂಜೂರು ಮಾಡಲಾಗಿದೆ. ಇದರಲ್ಲಿ 5ಎಕ್ರೆ ಇಎಸ್‍ಐ ಆಸ್ಪತ್ರೆ, 8ಎಕ್ರೆ ಪ್ರಾದೇಶೀಕ ವಿಜ್ಞಾನ ಕೇಂದ್ರ, 5ಎಕ್ರೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸೇರಿದೆ. ಇನ್ನೂ ಕೆಲವು ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲ್ಲಿ 18ಎಕ್ರೆ ಲಭ್ಯವಿದ್ದು, ಜೈವಿಕ ಉದ್ಯಾನಕ್ಕೆ ಬಳಸಿಕೊಳ್ಳಬಹುದಾಗಿದೆ. ಇನ್ನೂ 2ಎಕ್ರೆ ಲಭ್ಯವಿದೆ. ಇದೇ ರೀತಿ ಉದ್ದೇಶಿತ ವಾಜಪೇಯಿ ಬಡಾವಣೆಯಲ್ಲಿ 10ಎಕ್ರೆ ಮೀಸಲು ಅರಣ್ಯವಿದ್ದು ಇಲ್ಲಿಯೂ ಸಸಿಗಳನ್ನು ನೆಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ರಾಗಿಗುಡ್ಡದಲ್ಲಿ ಸುಮಾರು 20ಗುಂಟೆ ಜಮೀನು ಒತ್ತುವರಿ ಮಾಡಿ 22ಮನೆಗಳನ್ನು ನಿರ್ಮಿಸಲಾಗಿದ್ದು, ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಕೆ.ಪಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *