ಬೆಂಗಳೂರು-ಜು.9-ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರಿಹೋಗಿರುವ ಆಘಾತಕಾರಿ ವಿಷಯವನ್ನು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಬಹಿರಂಗಪಡಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಮ್ಮ ಕೈ ಮೀರುವ ಹಂತಕ್ಕೆ ಬಂದಿದೆ. ಆದರೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಎಲ್ಲರೂ ಇದನ್ನು ತಡೆಯಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆ ಜನತೆಯಲ್ಲಿ ಇನ್ನಷ್ಟು ಆತಂಕ ಉಂಟು ಮಾಡಿದೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆಯನ್ನು ಮೀರಿ ಕೆಲ ಜಿಲ್ಲೆಗಳಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ. ಆದರೂ ಜನರನ್ನು ರಕ್ಷಣೆ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ರಾಜ್ಯದ ಜನತೆ ಒಳಗಾಗುವುದು ಬೇಡ, ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ನಮ್ಮ ಸರ್ಕಾರ ಬದ್ಧವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಪೆÇಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ ಎಂದರು. ಕೊರೊನಾ ಸೋಂಕು ಪೀಡಿತರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡಲು ತಕ್ಷಣವೇ 200 ಆ್ಯಂಬುಲೆನ್ಸ್‍ಗಳನ್ನು ಖರೀದಿ ಮಾಡಲು ಸೂಚನೆ ಕೊಡಲಾಗಿದೆ. ನಿನ್ನೆಯಷ್ಟೇ 400 ಆ್ಯಂಬುಲೆನ್ಸ್ ಖರೀದಿಗೆ ಸೂಚನೆ ಕೊಡಲಾಗಿತ್ತು. ಕೊರೊನಾ ಪಾಸಿಟಿವ್ ಖಚಿತವಾದ ತಕ್ಷಣ ತಡಮಾಡದೆ ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಇವುಗಳನ್ನು ಮೀಸಲಿಡುವುದಾಗಿ ಹೇಳಿದರು. ಕೇಂದ್ರ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಇನ್ನು ಕೆಲವು ಕಠಿಣ ಕ್ರಮಗಳನ್ನು ಜಾರಿ ಮಾಡುವಂತೆ ಸಲಹೆ ಮಾಡಿದ್ದಾರೆ. ಅದನ್ನು ಸಹ ನಾವು ಅನುಷ್ಠಾನ ಮಾಡುತ್ತೇವೆ. ನಾಳೆ ಪತ್ರಿಕಾಗೋಷ್ಠಿ ಕರೆದಿದ್ದು ಎಲ್ಲ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸುವುದಾಗಿ ಯಡಿಯೂರಪ್ಪ ಹೇಳಿದರು.
ಕರ್ನಾಟಕದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ-ಸಿಎಂ ಬಿಎಸ್‍ವೈ
