ಹರಿಹರ : ವಿದ್ಯಾರ್ಥಿ ಜೀವನದ ಮೈಲುಗಲ್ಲಾದ ಎಸ್ ಎಸ್ ಎಲ್ ಸಿ ಪರೀಕ್ಷೆಯು ಅತ್ಯುತ್ತಮವಾಗಿ ಎದುರಿಸಬೇಕಾದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರೇರಣೆ,ಆತ್ಮವಿಶ್ವಾಸದ ಅಗತ್ಯವಿದೆ. ಇದನ್ನು ಶಿಕ್ಷಕರು ಹಾಗೂ ತಂದೆ- ತಾಯಿಗಳು ನೀಡಿದಾಗ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಮನೋಭಾವ ಹೆಚ್ಚುದರೊಂದಿಗೆ ಆತ್ಮವಿಶ್ವಾಸ ವೃದ್ಧಿಯಾಗಿ ಪರೀಕ್ಷಾ ಭಯ ದೂರವಾಗುವುದು. ಆ ಮೂಲಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿವಲ್ಲಿ ಸಹಕಾರಿಯಾಗುವುದು. ಈ ನಿಟ್ಟಿನಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ ಇವರು ಹಮ್ಮಿಕೊಳ್ಳುತ್ತಿರುವ ಪ್ರಸ್ತುತ ವರ್ಷದ 3ನೇ *ಯುವ ಜ್ಯೋತಿ* ಶಿಬಿರ “ಪರೀಕ್ಷೆಯನ್ನು ಎದುರಿಸುವುದು ಹೇಗೆ ?”ಎಂಬ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾದದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಹರಿಹರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹನುಮಂತಪ್ಪ ಇವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜು ನಿರ್ದೇಶಕರಾದ ವಂದನೀಯ ಫಾದರ್ ಎರಿಕ್ ಮಥಾಯಸ್ ಎಸ್ ಜೆ ಇವರು, ಯೋಜನಾ ಬದ್ಧವಾಗಿ ಉತ್ತಮ ಪರಿಶ್ರಮ ದೊಂದಿಗೆ ಎಲ್ಲಾ ಶಾಲೆಯ ವಿದ್ಯಾರ್ಥಿಗಳು 100% ಫಲಿತಾಂಶ ತರುವ ಮೂಲಕ ಹರಿಹರ ತಾಲೂಕಿಗೆ ಕೀರ್ತಿ ತರುವವರಾಗಿರೆಂದು ಶುಭ ಹಾರೈಸಿದರು. ಕಾಲೇಜಿನೊಂದಿಗೆ ಆತ್ಮೀಯ ಬಾಂಧವ್ಯವನ್ನಿಟ್ಟು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಿರಂತರ ಸಹಕರಿಸುತ್ತಿರುವ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶ್ರೀನಿವಾಸ ಪ್ರಸಾದ್ , ಶ್ರೀ ಶ್ರೀಧರ ಮಯ್ಯ, ಶ್ರೀ ರಾಜಶೇಖರ ಕೆ.ಎನ್, ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಪುಷ್ಪಲತಾ ಅರಸ್, ಉಪ ಪ್ರಾಂಶುಪಾಲರಾದ ಶ್ರೀ ಮೌಸಿನ್ ಉಲ್ಲಾ, ಶ್ರೀ ಪಾಸ್ಕಲ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಯೋಜಕರಾದ ಶ್ರೀ ಮಂಜುನಾಥ್ ಟಿ.ಎಸ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಮೊರಾರ್ಜಿ ದೇಸಾಯಿ ನಂದಿಗುಡಿ,ದೇವರಬೆಳಕೆರೆ, ಇಂದಿರಾಗಾಂಧಿ ಪ್ರೌಢಶಾಲೆ ಕೊಂಡಜ್ಜಿ, ಎಂ.ಕೆ.ಇ.ಟಿ ಪ್ರೌಢಶಾಲೆ ಹರಿಹರ ಇಲ್ಲಿನ ಸುಮಾರು 200 ಕ್ಕೂ ಹೆಚ್ಚು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಕಾಲೇಜು ಕನ್ನಡ ಉಪನ್ಯಾಸಕರಾದ ಶ್ರೀ ಅಬ್ದುಲ್ ರಹಮಾನ್ ಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ- ಯುವ ಜ್ಯೋತಿ ಶಿಬಿರ ~ಭಯ ಮುಕ್ತರಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ-ಶ್ರೀ ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು
