ಬುದ್ಧ,ಬಸವ,ಅಂಬೇಡ್ಕರ್ ಚಿಂತನೆ, ಸಂವಿಧಾನದ ವೈಭವೀಕರಣ ವಾದಾಗ ಭಾರತ ಶಕ್ತಿಶಾಲಿಯಾಗುತ್ತದೆ ; ಸಂವಿಧಾನ ಓದು ಅಭಿಯಾನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯ 


ಹರಿಹರ : ಬುದ್ಧ,ಬಸವ,ಅಂಬೇಡ್ಕರ್ ಚಿಂತನೆ ಜೊತೆ ಸಂವಿಧಾನದ ವೈಭವೀಕರಣವಾದರೆ ಭಾರತ ಇನ್ನಷ್ಟು ಶಕ್ತಿಶಾಲಿಯಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
    ನಗರದ ಹೊರವಲಯ ಬೈಪಾಸ್ ಹನಗವಾಡಿ ಸಮೀಪದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ 2 ದಿನಗಳ ಕಾಲ ನಡೆಯುವ ಸಂವಿದಾನ ಓದು ಅಭಿಯಾನ, ಮಾನವ ಬಂಧುತ್ವ ವೇದಿಕೆ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿoದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡoತೆ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ಅವರು,
ಬುದ್ಧ, ಬಸವ, ಅಂಬೇಡ್ಕರ್‌ರ ಚಿಂತನೆಗಳು, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳು, ಫ್ರೆಂಚ್, ರಷ್ಯಾ, ಭಾರತ ಸ್ವಾತಂತ್ರ್ಯಸಂಗ್ರಾಮ ಸೇರಿದಂತೆ ವಿವಿಧ ದೇಶಗಳ ಕ್ರಾಂತಿಗಳಿoದ ಭಾರತದ ಸಂವಿಧಾನ ಪ್ರಭಾವಿತವಾಗಿದೆ. ಧರ್ಮ, ಜಾತಿಗಳ ವೈಭವೀಕರಣದ ಬದಲು ಸಂವಿಧಾನದ ವೈಭವೀಕರಣವಾದರೆ ಭಾರತ ಇನ್ನಷ್ಟು ಶಕ್ತಿಶಾಲಿ ಯಾಗಿ ಬೆಳೆಯಲು ಸಾಧ್ಯವೆಂದು ತಿಳಿಸಿದರು.
    ಸನಾತನ ಧರ್ಮ ಬೇರೆ ಭಾರತದ ನಾಗರೀಕತೆ ಬೇರೆ. ದೇಶದ ಐದು ಸಾವಿರ ವರ್ಷಗಳ ಹಿಂದಿನ ನಾಗರೀಕತೆಯನ್ನೆ ಸನಾತನ ಧರ್ಮ ಎನ್ನಲಾಗದು. ಸನಾತನ ಧರ್ಮದ ಬಗ್ಗೆ ಮಾತನಾಡುವ ವರು ಈ ದೇಶದಲ್ಲಿರುವ ಜಾತಿ ವ್ಯವಸ್ಥೆ, ದಲಿತರು, ಮಹಿಳೆಯರ ಮೇಲಿನ ಶೋಷಣೆ, ಅಸ್ಪೃಶ್ಯತೆ ಆಚರಣೆ, ಈ ವರ್ಗದವರನ್ನು ಶತಮಾನಗಳಿಂದ ಶಿಕ್ಷಣದಿಂದ ದೂರ ಇಟ್ಟಿದ್ದು ಏಕೆಂದು ಸ್ಪಷ್ಟನೇ ನೀಡಿದರೆ ಕೂಡಲೇ ನಾನು ಸನಾತನ ಧರ್ಮವನ್ನು ಅಪ್ಪಿಕೊಳ್ಳುತ್ತೇನೆಂದು ಸವಾಲು ಎಸೆದರು.
    ಏಕ ನಾಗರೀಕತ್ವ, ಒಂದು ದೇಶ ಒಂದು ಚುನಾವಣೆ, ಇಂಡಿಯಾ ಭಾರತ, ಘರ್ ವಾಪಸಿ, ಲವ್ ಜಿಹಾದ್, ಗೋ ಮಾಂಸ ನಿಷೇಧ ದಂತಹ ನಿಯಮಗಳ ಬಲವಂತದ ಹೇರಿಕೆ ನಮ್ಮ ದೇಶಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ದೇಶದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ನಡೆಯಬಾರದೆಂದು ಹೇಳಿದರು.
    ಬಹುತೇಕ ಮುಸಲ್ಮಾನರು,ದಲಿತರು,ಬುಡಕಟ್ಟು ಜನಾಂಗದವ ರು ಬಹು ಕಾಲದಿಂದ ಗೋಮಾಂಸ ಸೇವನೆ ಮಾಡುತ್ತಾರೆ. ಆಹಾರದ ವಿಷಯದಲ್ಲಿ ಮೂಗು ತೂರಬಾರದು.ಒಂದು ಕುಟುಂಬ ದ ಸದಸ್ಯರ ನಡುವೆಯೆ ಭಿನ್ನ ಆಲೋಚನೆ, ಅಭಿರುಚಿ ಇರುತ್ತದೆ. ಹೊಂದಿ ಕೊಂಡು ನಡೆಯುವುದೆ ಸೂಕ್ತ ದಾರಿ. ಆಹಾರ ಸೇವನೆ, ಧಾರ್ಮಿಕ ಆಚರಣೆ ಅವರವರ ಸಮುದಾಯಕ್ಕೆ ಬಿಟ್ಟದ್ದು ಅದನ್ನು ಅಡ್ಡಿಪಡಿಸುವುದು ಸರಿಯಲ್ಲ ಎಂದರು.
      ದೇಶದಲ್ಲಿ 4635 ಜಾತಿ, ಉಪಜಾತಿಗಳು, ನೂರಾರು ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ, ಭೌಗೋಳಿಕತೆ ಹೊಂದಿರುವ ಭಾರತದ ಇತಿಹಾಸ ತಿಳಿಯದೆ ಸಂವಿಧಾನ ಅರಿಯಲು ಸಾಧ್ಯವಿಲ್ಲ. ಒಂದು ದೇಶ ಒಂದು ಚುನಾವಣೆ, ಏಕ ನಾಗರೀಕತ್ವ, ಏಕ ನಾಯಕ, ಏಕ ಧರ್ಮ ಎಂಬ ಮನೋಧರ್ಮ ಅಪಾಯಕಾರಿ ನಿರಂಕುಶ ಪ್ರಭುತ್ವದ ಸಂಕೇತವಾಗುತ್ತದೆ ಎನ್ನುವ ಕಾರಣಕ್ಕೆ ಸಂವಿಧಾನ ಬಹುತ್ವಕ್ಕೆ ಮನ್ನಣೆ ನೀಡಿದೆ ಎಂದರು.
    ಸoವಿಧಾನದ ಓದು ಕೇವಲ ನ್ಯಾಯಾಧೀಶರು, ವಕೀಲರಿಗೆ ಸೀಮಿತವಲ್ಲ. ವಿದ್ಯಾರ್ಥಿಗಳು, ಗೃಹಣಿಯರು, ಜನಸಾಮಾನ್ಯರೂ ಕೂಡ ಸಂವಿಧಾನವನ್ನು ಓದಿ ಅದರ ಮಾಹಿತಿ ಪಡೆಯಬೇಕು. ಕಳೆದ ನಾಲ್ಕು ದಶಕಗಳಿಂದ ಸಂವಿಧಾನ ಓದುವ ಜಾಗೃತಿಗಾಗಿ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿರುವುದಾಗಿ ಅಭಿಯಾನದಲ್ಲಿ ತಿಳಿಸಿದರು.
    ಇದೇ ವೇಳೆ ಉಚ್ಚ ನ್ಯಾಯಾಲಯದ ವಕೀಲ ಅನಂತನಾಯಕ್ ಮಾತನಾಡಿ, ಸನಾತನ ಧರ್ಮದ ಬಗ್ಗೆ ಚರ್ಚೆ ಮಾಡುವ ಬದಲಿಗೆ ದೇಶದ ಬಡತನ, ಅನಕ್ಷರತೆ, ನಿರುದ್ಯೋಗ, ಅಸ್ಪೃಶ್ಯತೆಯಂತಹ ಸಾಮಾಜಿಕ ಕಂಟಕಗಳು ನಿವಾರಣೆಗೆ ಆಧ್ಯತೆ ನೀಡುವಂತಹ ಕೆಲಸಗಳಿಗೆ ಸರ್ಕಾರಗಳು ಗಮನಹರಿಸಬೇಕು ಎಂದು ಹೇಳಿದರು.
      ಪ್ರೊ,ಬಿ.ಕೃಷ್ಣಪ್ಪ ಟ್ರಸ್ಟ್ ನ ಹನಗವಾಡಿ ರುದ್ರಪ್ಪ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ದಾವಣಗೆರೆ ವಕೀಲ ಅನೀಶ್ ಪಾಷಾ, ಕಿಗ್ಗ ಎಸ್.ಜಿ.ರಾಜಶೇಖರ್, ಮಾಡಾಳ್ ಶಿವಕುಮಾರ್, ಬಿ. ರಾಜಶೇಖರ ಮೂರ್ತಿ, ಉಕ್ಕಡ ಗಾತ್ರಿ ಮಂಜುನಾಥ್ ಸೇರಿದಂತೆ ಹಲವರು ಸಂವಿಧಾನ ಕುರಿತು ಮತ್ತು ಸಂವಿಧಾನ ಓದಿನ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಈ ಸಮಯದಲ್ಲಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಕಾರ್ಯಗಾರದಲ್ಲಿ ಭಾಗಿಯಾಗಿ ಸಂವಿಧಾನದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *